ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಆರಿಕ್ಕಾಡಿ ಶ್ರೀ ಹನುಮಾನ್ ದೇಗುಲ ವಠಾರದ ಕೋಟೆಯ ಸನಿಹದ ಪಾಳುಬಾವಿಯಲ್ಲಿ ಇದೆಯೆನ್ನಲಾದ ಭಾರೀ ನಿಧಿಯನ್ನು ಹೊರತೆಗೆಯಲು ಅಗೆಯುತ್ತಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿದಂತೆ ಐದು ಮಂದಿಯ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿಒತಿ ಉಪಾಧ್ಯಕ್ಷ ಮುಜೀಬ್ ಕಂಬಾರು, ಪೊವ್ವಲ್ ನಿವಾಸಿ ಮಹಮ್ಮದ್ ಫಿರೋಜ್, ಮೊಗ್ರಾಲ್‍ಪುತ್ತೂರು ನಿವಾಸಿ ಜಾಫರ್, ಪಾಲಕುನ್ನು ನಿವಾಸಿ ಅಜಾಜ್ ಹಾಗೂ ನೀಲೇಶ್ವರ ನಿವಾಸಿ ಹಾಗೂ ಬಂಗಾಳ ಮೂಲಕ ಸಹದುದ್ದೀನ್ ಬಂಧಿತರು. ಆರೋಪಿಗಳು ಸಂಚಾರಕ್ಕೆ ಬಳಸಿದ್ದ ಎರಡು ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಸೋಮವಾರ ಸಂಜೆ ಪ್ರಾಚ್ಯವಸ್ತು ಇಲಾಖೆ ಅಧೀನದಲ್ಲಿರುವ ಆರಿಕ್ಕಾಡಿ ಕೋಟೆ ಸನಿಹದ ಪಾಳುಬಾವಿಯೊಳಗಿಂದ ಅಗೆಯುವ ಶಬ್ದ ಕೇಳಿ ಆಸುಪಾಸಿನವರು ಆಗಮಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪುರಾತನ ಆರಿಕ್ಕಾಡಿ ಕೋಟೆಯ ಹನುಮಾನ್ ದೇವಾಲಯಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ನಿಧಿಯೊಂದು ಕೋಟೆ ಆಸುಪಾಸು ಇರುವ ಬಗ್ಗೆ ಮೂರು ದಿವಸಗಳ ಹಿಂದೆಯೇ ತಂಡ ಸಂಚು ನಡೆಸಿ, ಈ ಬಗ್ಗೆ ಸ್ಥಳ ಪರಿಶೋಧನೆ ನಡೆಸಿತ್ತೆನ್ನಲಾಗಿದೆ. ಈ ಪ್ರದೇಶದಲ್ಲಿ ನಿಧಿ ಇರುವ ಬಗ್ಗೆ ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಜೀಬ್ ಕಂಬಾರು ತಂಡಕ್ಕೆ ಮಾಹಿತಿ ನೀಡಿದ್ದಾನೆಂಬ ಮಾಹಿತಿಯಿದೆ.
ಬಾವಿಯೊಳಗೆ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು ಆಗಮಿಸಿದಾಗ ಮೇಲಿದ್ದ ಮೂರುಮಂದಿಯಲ್ಲಿ ಇಬ್ಬರು ಓಡಿ ಪರಾರಿಯಾಗಲೆತ್ನಿಸಿದ್ದು, ಇವರನ್ನು ಸ್ಥಳೀಯ ನಿವಾಸಿಗಳು ಹಿಂಬಾಲಿಸಿ ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.



