ಮುಳ್ಳೇರಿಯ: ಕೇರಳದ ಅರಣ್ಯಪ್ರವೇಶದ ವ್ಯಾಪ್ತಿಯ ಅಡೂರು ಸನಿಹದ ತಲ್ಪಚ್ಚೇರಿಯಲ್ಲಿ ಗಂಡಾನೆಯೊಂದು ಸಾವನ್ನಪ್ಪಿದ ರೀತಿಯಲ್ಲಿ ಪತ್ತೆಯಾಗಿದೆ. ಎರಡು ಗಂಡು ಕಾಡಾನೆಗಳು ಪರಸ್ಪರ ಕಾದಾಟದಿಂದ ಒಂದು ಆನೆ ಸಾವನ್ನಪ್ಪಿರಬೇಕೆಂದು ಸಮಸಯಿಸಲಾಗಿದೆ. ಮೃತಪಟ್ಟ ಆನೆ ಶರೀರದಲ್ಲಿ ದಂತದಿಂದ ತಿವಿದ ಗಾಯದ ಗುರುತು ಪತ್ತೆಯಾಗಿದ್ದು, ಸಂಪೂರ್ಣ ರಕ್ತದಿಂದ ತೊಯ್ದ ಸ್ಥಿತಿಯಲ್ಲಿದೆ. ಆನೆ ಮೃತಪಟ್ಟ ಜಾಗ ಕೇರಳ ಅರಣ್ಯಪ್ರದೇಶದಿಂದ ನೂರು ಮೀ. ದೂರದ ಕರ್ನಾಟಕದ ಅರಣ್ಯದಲ್ಲಿರುವುದರಿಂದ ಕರ್ನಾಟಕ ಮತ್ತು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳೂ ಜಂಟಿ ತನಿಖೆ ಆರಂಭಿಸಿದ್ದಾರೆ. ತನಿಖೆಗೆ ಅಗತ್ಯ ಸಹಾಯ ಒದಗಿಸುವುದಾಗಿ ಕೇರಳ ಅರಣ್ಯ ಇಲಾಖೆ ಅಡೂರು ಸೆಕ್ಷನ್ ಅರಣ್ಯಾಧಿಕಾರಿ ರಾಜು ಎಂ.ಪಿ ತಿಳಿಸಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಫೋರೆನ್ಸಿಕ್ ತಜ್ಞರ ತಂಡ ಸೋಮವಾರ ಸ್ಥಳಕ್ಕಾಗಮಿಸಿ ಆನೆ ಕಳೇಬರದ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.
ರಾತ್ರಿವೇಳೆ ಆನೆಗಳು ಜೋರಾಗಿ ಘೀಳಿಡುತ್ತಿದ್ದ ಶಬ್ದ ಕೇಳಿಬಂದಿತ್ತು. ಈ ಪ್ರದೇಶದಲ್ಲಿ ಆನೆಗಳು ಘೀಳಿಡುವುದು ಸಾಮಾನ್ಯವಾಗಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಇಲ್ಲಿನ ಜನತೆ ಹೆಚ್ಚು ಗಮನಹರಿಸಿರಲಿಲ್ಲ. ಆನೆ ಕಳೇಬರ ಪತ್ತೆಯಾಗುತ್ತಿದ್ದಂತೆ ರಾತ್ರಿವೇಳೆ ಆನೆಗಳ ಕಾದಾಟದಿಂದ ಸಾವು ಸಂಭವಿಸಿರಬೇಕೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಸ್ಪರ ಕಾದಾಟದಲ್ಲಿ ತೊಡಗಿದ್ದ ಇನ್ನೊಂದು ಆನೆಯೂ ಗಾಯಗೊಂಡಿರುವ ಸಾಧ್ಯತೆಯಿದ್ದು, ಈ ಆನೆಗಾಘಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಅಡೂರು, ಪಾಂಡಿ, ಕಾನತ್ತೂರು, ಕಾರಡ್ಕ ಸೇರಿದಮತೆ ನಾನಾ ಕಡೆ ಕಾಡಾನೆಗಳ ಉಪಟಳ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ವ್ಯಾಪಕ ಕೃಷಿನಾಶಕ್ಕೂ ಕಾರಣವಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.


