ನವದೆಹಲಿ: ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ - 1991ರ ಸಿಂಧುತ್ವ ಮತ್ತು ವಿವಿಧ ಅಂಶಗಳನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನೂ ನೋಟಿಸ್ ಜಾರಿ ಮಾಡದ ಹೊಸ ಅರ್ಜಿಗಳನ್ನು ವಜಾಗೊಳಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ನೋಟಿಸ್ ನೀಡಿರುವ ಬಾಕಿ ಅರ್ಜಿಗಳ ವಿಚಾರಣೆಯನ್ನು ಮೂವರು ನ್ಯಾಯಮೂರ್ತಿಗಳ ಪೀಠವು ಏಪ್ರಿಲ್‌ನಲ್ಲಿ ನಡೆಸಲಿದೆ ಎಂದು ಹೇಳಿತು.
ಆದಾಗ್ಯೂ, ಸಮಾಜವಾದಿ ಪಕ್ಷದ ನಾಯಕಿ ಮತ್ತು ಕೈರಾನಾ ಕ್ಷೇತ್ರದ ಸಂಸದೆ ಇಕ್ರಾ ಚೌಧರಿ ಒಳಗೊಂಡಂತೆ ಈಚೆಗೆ ಅರ್ಜಿ ಸಲ್ಲಿಸಿದವರಿಗೆ ಹಾಗೂ ಇದುವರೆಗೂ ನೋಟಿಸ್ ಜಾರಿ ಮಾಡದಿರುವ ಅರ್ಜಿದಾರರಿಗೆ ಹೊಸ ಅಂಶಗಳನ್ನು ಸೇರಿಸಿ ಮತ್ತೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿದೆ.
ಇನ್ನೂ ನೋಟಿಸ್ ಜಾರಿ ಮಾಡದ ಹೊಸ ಅರ್ಜಿಗಳನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ, 'ಸಲ್ಲಿಕೆಯಾಗಿರುವ ಹೊಸ ಅರ್ಜಿಗಳ ಸಂಖ್ಯೆಯನ್ನು ಗಮನಿಸಿದ ಬಳಿಕ ನಾವು ಅನಿವಾರ್ಯವಾಗಿ ಈ ಆದೇಶ ನೀಡುತ್ತಿದ್ದೇವೆ' ಎಂದಿತು.
'ಈ ತನಕ ನೋಟಿಸ್ ನೀಡದೇ ಇರುವ ಬಾಕಿ ಅರ್ಜಿಗಳು ವಜಾಗೊಂಡಿವೆ. ಆದರೆ, ಹೊಸ ಅಂಶಗಳನ್ನು ಸೇರಿಸಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಾಕಿ ಉಳಿದಿರುವ ಅರ್ಜಿಗಳಲ್ಲಿ ಪ್ರಸ್ತಾಪಿಸದೇ ಇರುವಂತಹ ಅಂಶಗಳು ಇದ್ದರೆ ಮಾತ್ರ ಹೊಸ ಅರ್ಜಿಗಳನ್ನು ಪರಿಗಣಿಸುತ್ತೇವೆ' ಎಂದು ಹೇಳಿತು.
ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಎಲ್ಲ ಬಾಕಿ ಅರ್ಜಿಗಳನ್ನು ಏಪ್ರಿಲ್ 1ರಂದು ಆರಂಭವಾಗುವ ವಾರದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಪೀಠವು ಪಟ್ಟಿ ಮಾಡಿತು. ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವು 1947ರ ಆಗಸ್ಟ್ 15ರಂದು ಯಾವ ರೀತಿಯಲ್ಲಿ ಇತ್ತೋ, ಅದನ್ನು ಆ ರೀತಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಈ ಕಾಯ್ದೆ ಹೇಳುತ್ತದೆ.
'ನಮ್ಮಲ್ಲಿ ಹೊಸ ಅಂಶಗಳು ಇವೆ ಎಂದು ಹೇಳಿ ಜನರು ಹೊಸ ಅರ್ಜಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹೊರತುಪಡಿಸಿ ಹೊಸ ಅರ್ಜಿಗಳನ್ನು ನಿಭಾಯಿಸುವುದು ನಮಗೆ ಅಸಾಧ್ಯ' ಎಂದು ಸಿಜೆಐ ಹೇಳಿದರು.
ಸಾಲು-ಸಾಲು ಅರ್ಜಿಗಳು
* 10 ಮಸೀದಿಗಳ ಸಮೀಕ್ಷೆ ನಡೆಸುವಂತೆ ಕೋರಿ ವಿವಿಧ ಹಿಂದೂ ಸಂಘಟನೆಗಳು 18 ಅರ್ಜಿಗಳನ್ನು ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.
* ವಾರಾಣಸಿಯ ಗ್ಯಾನವಾಪಿ ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ಸಂಭಲ್‌ನ ಶಾಹಿ ಜಾಮಾ ಮಸೀದಿಗೆ ಸಂಬಂಧಿಸಿದ ಅರ್ಜಿಗಳೂ ಇದರಲ್ಲಿ ಸೇರಿವೆ.
* ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಒವೈಸಿ ಎಸ್‌ಪಿ ಸಂಸದೆ ಇಕ್ರಾ ಚೌಧರಿ ಸೇರಿದಂತೆ ಹಲವರು 1991ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.




