HEALTH TIPS

ಹಸೀನಾ ಪುತ್ರನನ್ನು ಅಪಹರಿಸಿ ಕೊಲ್ಲಲು ಸಂಚು ಪ್ರಕರಣ: ಪತ್ರಿಕಾ ಸಂಪಾದಕ ಖುಲಾಸೆ

ಢಾಕಾ: 2015ರಲ್ಲಿ ಅಮೆರಿಕದಲ್ಲಿ ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಾಜೀಬ್ ವಾಜೀದ್ ಜಾಯ್ ಅವರನ್ನು ಅಪಹರಿಸಿ ಕೊಲ್ಲಲು ವಿಫಲ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬಾಂಗ್ಲಾದೇಶದ ನ್ಯಾಯಾಲಯವು ಪ್ರಮುಖ ಪತ್ರಿಕೆಯ ಸಂಪಾದಕರೊಬ್ಬರನ್ನು ಸೋಮವಾರ ಖುಲಾಸೆಗೊಳಿಸಿದೆ.

ಅಮರ್ ದೇಶ್‌ ದಿನಪತ್ರಿಕೆ ಸಂಪಾದಕ ಮಹ್ಮದುರ್ ರೆಹಮಾನ್ ಖುಲಾಸೆಗೊಂಡವರು. ಢಾಕಾದ 4ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ತಾರಿಕ್ ಅಜೀಜ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.

ಸಂಪಾದಕ ಮಹ್ಮದುರ್ ರೆಹಮಾನ್ ಅವರು ತಮಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದು 'ದಿ ಡೈಲಿ ಸ್ಟಾರ್' ಪತ್ರಿಕೆ ವರದಿ ಮಾಡಿದೆ.

ಮೇಲ್ಮನವಿದಾರನ ವಿರುದ್ಧ ಹೊರಿಸಲಾದ ಆರೋಪಗಳು ಸುಳ್ಳು ಮತ್ತು ಕಟ್ಟುಕಥೆ ಎಂದು ಸಾಬೀತಾಗಿದೆ. ಆದ್ದರಿಂದ, ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿ, ಅವರನ್ನು ಖುಲಾಸೆಗೊಳಿಸಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ತೀರ್ಪಿನ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಮಹ್ಮದುರ್, 'ನ್ಯಾಯಾಲಯದಿಂದ ನನಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ಆದರೆ ಫ್ಯಾಸಿಸಂ ವಿರುದ್ಧದ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.

2024ರ ಆಗಸ್ಟ್ 17ರಂದು, ಢಾಕಾ ನ್ಯಾಯಾಲಯವು ಮಹ್ಮದುರ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೇ ಇದೇ ಪ್ರಕರಣದಲ್ಲಿ ಹಿರಿಯ ಪತ್ರಕರ್ತ ಶಫೀಕ್ ರೆಹಮಾನ್, ರಾಷ್ಟ್ರೀಯತಾವಾದಿ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಉಪಾಧ್ಯಕ್ಷ ಮೊಹಮ್ಮದ್ ಉಲ್ಲಾ ಮಾಮುನ್, ಅವರ ಪುತ್ರ ರಿಜ್ವಿ ಅಹ್ಮದ್ ಸೀಸರ್ ಮತ್ತು ಅಮೆರಿಕ ಮೂಲದ ಉದ್ಯಮಿ ಮಿಜಾನೂರ್ ರೆಹಮಾನ್ ಭುಯಾನ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಐದೂವರೆ ವರ್ಷಗಳಿಗೂ ಹೆಚ್ಚು ಕಾಲ ದೇಶಭ್ರಷ್ಟನಾಗಿದ್ದ ಮಹ್ಮದುರ್ ಕಳೆದ ವರ್ಷ ಸೆಪ್ಟೆಂಬರ್ 27ರಂದು ಬಾಂಗ್ಲಾದೇಶಕ್ಕೆ ಮರಳಿದ್ದರು. ಎರಡು ದಿನಗಳ ಬಳಿಕ ಅವರು ಢಾಕಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶರಣಾಗಿದ್ದರು, ಬಳಿಕ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.

ಏನಿದು ಪ್ರಕರಣ:

ಮಾಮುನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಹಿರಿಯ ನಾಯಕರು ಇಂಗ್ಲೆಂಡ್‌, ಅಮೆರಿಕ ಮತ್ತು ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಸಭೆ ಸೇರಿ ಶೇಖ್ ಹಸೀನಾ ಅವರ ಸಲಹೆಗಾರರಾಗಿದ್ದ ಅವರ ಪುತ್ರ ಜಾಯ್ ಅವರನ್ನು ಅಪಹರಿಸಿ ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ 2015ರ ಆಗಸ್ಟ್ 3ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮಹ್ಮದುರ್ ಮತ್ತು ಶಫೀಕ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries