ವಾಷಿಂಗ್ಟನ್: ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ಗೆ ನಿರ್ಬಂಧ ಹೇರುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸಹಿ ಹಾಕಿದ್ದಾರೆ.
ಅಮೆರಿಕ ಮತ್ತು ನಿಕಟ ಮಿತ್ರ ಇಸ್ರೇಲ್ ಅನ್ನು ಗುರಿಯಾಗಿಸುವ ಕಾನೂನುಬಾಹಿರ ಹಾಗೂ ಆಧಾರರಹಿತ ಕ್ರಮಗಳು ತೆಗೆದುಕೊಂಡಿರುವುಕ್ಕೆ ನಿರ್ಬಂಧ ಹೇರಿದ್ದಾಗಿ ಅವರು ಹೇಳಿದ್ದಾರೆ.
ಹೊಸ ಆದೇಶದ ಪ್ರಕಾರ ಅಮೆರಿಕ ಅಥವಾ ಮಿತ್ರ ರಾಷ್ಟ್ರಗಳ ಮೇಲೆ ತನಿಖೆಗೆ ಸಹಾಯ ಮಾಡುವ ವ್ಯಕ್ತಿಗಳು ಹಾಗೂ ಅವರ ಕುಟುಂಬಕ್ಕೆ ಹಣಕಾಸು ಹಾಗೂ ವಿಸಾ ನಿರ್ಬಂಧಗಳನ್ನು ಹೇರಲಾಗುತ್ತದೆ.
ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಅವರು ಅಮೆರಿಕ ಪ್ರವಾಸದಲ್ಲಿರುವಾಗಲೇ ಕಾರ್ಯಕಾರಿ ಆದೇಶಕ್ಕೆ ಸಹಿ ಬಿದ್ದಿದೆ.
ಗಾಜಾದಲ್ಲಿ ನಡೆಸಿದ ಯುದ್ಧಾಪರಾಧಕ್ಕೆ ಇಸ್ರೇಲ್ ಪ್ರಧಾನಿ ನೇತಾನ್ಯಾಹು ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಕಳೆದ ವರ್ಷ ನವೆಂಬರ್‌ನಲ್ಲಿ ಬಂಧನ ವಾರಂಟ್ ಹೊರಡಿಸಿತ್ತು. ಹಮಾಸ್ ಕಮಾಂಡರ್ ಮೇಲೆಯೂ ಇದೇ ರೀತಿಯ ವಾರಂಟ್ ಜಾರಿ ಮಾಡಿತ್ತು.
ಇಸ್ರೇಲ್ ಹಾಗೂ ಹಮಾಸ್ ನಾಯಕರ ವಿರುದ್ದ ಏಕಕಾಲದಲ್ಲಿ ವಾರಂಟ್ ಜಾರಿ ಮಾಡಿ, ಹಮಾಸ್ ಮತ್ತು ಇಸ್ರೇಲ್ ನಡುವಿನ ಅನೈತಿಕ ಸಮಾನತೆ ತೋರ್ಪಡಿಸಿದೆ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.
ಕೋರ್ಟ್‌ನ ಇತ್ತೀಚಿನ ಕ್ರಮಗಳು ಪೂರ್ವಗ್ರಹದಿಂದ ಕೂಡಿವೆ. ಅಮೆರಿಕನ್ನರಿಗೆ ಕಿರುಕುಳ ನೀಡುವಂತಿದೆ, ನಿಂದಿಸುವಂತಿದೆ ಎಂದು ಕಾರ್ಯಕಾರಿ ಆದೇಶದಲ್ಲಿ ಹೇಳಲಾಗಿದೆ.
ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ನಡವಳಿಕೆಯು ಅಮೆರಿಕದ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಹಾಗೂ ಇಸ್ರೇಲ್ ಸೇರಿದಂತೆ ಮಿತ್ರರಾಷ್ಟ್ರಗಳ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯನ್ನು ದುರ್ಬಲಗೊಳಿಸುವಂತಿದೆ' ಎಂದು ಆದೇಶದಲ್ಲಿ ಹೇಳಲಾಗಿದೆ.
ಅಮೆರಿಕವು ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ಭಾಗವಲ್ಲ. ಅಮೆರಿಕದ ಅಧಿಕಾರಿಗಳು ಅಥವಾ ನಾಗರಿಕರ ಮೇಲೆ ಕೋರ್ಟ್‌ನ ವ್ಯಾಪ್ತಿ ಒಳಪಡುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

