ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಂಗೋಡು ಸನಿಹ ಪಯಸ್ವಿನಿ ಹೊಳೆಯಲ್ಲಿ ಕಿರು ಅಣೆಕಟ್ಟು ನಿರ್ಮಾಣಕ್ಕಾಗಿ ಸರ್ವೇ ನಡೆಸುತ್ತಿರುವ ಮಧ್ಯೆ, ಸಿಬ್ಬಂದಿ ಹೊಳೆಗೆ ಬಿದ್ದು, ದಾರುಣವಾಗಿ ಮೃತಪಟ್ಟಿದ್ದಾರೆ. ಆಲಪ್ಪುಳ ಚೆರಿಯನಾಡ ಮಾಂಬ್ರ ನಿವಾಸಿ ಟಿ. ನಿಖಿಲ್(28)ಮೃತಪಟ್ಟ ಸಿಬ್ಬಂದಿ. ಹೊಳೆ ಅಂಚಿನ ಬಂಡೆಕಲ್ಲಿನಿಂದ ಆಯತಪ್ಪಿ ನೀರಿಗೆ ಬಿದ್ದು, ಸಾವು ಸಂಭವಿಸಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ತಯಾರಿಸಿದ್ದು, ಇದಕ್ಕಾಗಿ ಕೊಚ್ಚಿ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಕಂಪೆನಿಗೆ ಸರ್ವೇ ಗುತ್ತಿಗೆ ನೀಡಲಾಗಿತ್ತು. ಇದರ ಉಪಗುತ್ತಿಗೆ ಸಂಸ್ಥೆಯಲ್ಲಿ ನಿಖಿಲ್ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ಸರ್ವೇ ಕಾರ್ಯಕ್ಕಾಗಿ ನಾಲ್ಕು ಮಂದಿಯನ್ನು ನಿಯೋಜಿಸಲಾಗಿದ್ದು, ತಲಾ ಇಬ್ಬರು ಹೊಳೆಯ ಎರಡೂ ಪಾಶ್ರ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದ ಮಧ್ಯೆ ಲೈಫ್ ಜಾಕೆಟ್ ಧರಿಸಿದ್ದರೂ, ಮಂಧ್ಯಂತರ ವೇಳೆ ಇದನ್ನು ಕಳಚಿಟ್ಟು, ಹೊಳೆಯ ಅಂಚಿನ ಬಂಡೆಕಲ್ಲಿನಲ್ಲಿ ವಿಶ್ರಾಂತಿ ಪಡೆದು ಎದ್ದುನಿಲ್ಲುತ್ತಿದ್ದಂತೆ ನಿಖಿಲ್ ಆಯತಪ್ಪಿ ಬಿದ್ದಿದ್ದರು. ಜತೆಗಿದ್ದವರು ರಕ್ಷಿಸಲು ಯತ್ನಿಸಿ ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳಕ್ಕೆ ನೀಡಿದ ಮಾಹಿತಿಯನ್ವಯ ಇವರನ್ನು ನೀರಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಶವಮಹಜರಿನ ನಂತರ ಮೃತದೇಹ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.




