ನವದೆಹಲಿ: ಅಕ್ರಮ ವಲಸೆ ಹೋಗಿರುವ ಭಾರತೀಯರ ಜತೆ ಅಮೆರಿಕದ 'ಅಮಾನವೀಯ ವರ್ತನೆ'ಯು ಸಂಸತ್ತಿ ನಲ್ಲಿ ಗುರುವಾರ ಪ್ರತಿಧ್ವನಿಸಿತು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಸ್ಪಷ್ಟನೆ ಕೋರಿ ಲೋಕಸಭೆ ಮತ್ತು ರಾಜ್ಯಸಭೆ ಯಲ್ಲಿ ವಿರೋಧ ಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದವು.
ವಲಸಿಗರಿಗೆ ಕೈಕೋಳ ತೊಡಿಸಿದ ಕ್ರಮವನ್ನು ವಿರೋಧಿಸಿ ವಿಪಕ್ಷಗಳ ಸದಸ್ಯರು ಸ್ಪೀಕರ್ ಪೀಠದ ಮುಂದೆ ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆ ಕಲಾಪವನ್ನು ನಾಲ್ಕು ಸಲ ಮುಂದೂಡಲಾಯಿತು.
ಬೆಳಿಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಕಲಾಪವನ್ನು ಮೊದಲ ಬಾರಿ ಮುಂದೂಡಿದರೆ, ಆ ಬಳಿಕ ಮಧ್ಯಾಹ್ನ 12 ಮತ್ತು 2ಕ್ಕೆ ಮುಂದೂಡಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವರು ಮಧ್ಯಾಹ್ನ 3.30ಕ್ಕೆ ಲೋಕಸಭೆಯಲ್ಲಿ ಹೇಳಿಕೆ ನೀಡುವರು ಎಂದು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದರು.
ವಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಎಸ್.ಜೈಶಂಕರ್ ಅವರು ಮಧ್ಯಾಹ್ನ 3.30ಕ್ಕೆ ಪ್ರಕಟಣೆ ಓದಿದರು. ಆ ಬಳಿಕವೂ ಗದ್ದಲ ಮುಂದುವರಿದ ಕಾರಣ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.
ಅವಮಾನ ಸಹಿಸದು:
ಭಾರತೀಯರಿಗೆ ಆಗಿರುವ ಅವಮಾನವನ್ನು 'ಇಂಡಿಯಾ' ಮೈತ್ರಿಕೂಟ ಸಹಿಸದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅಮೆರಿಕವು ವಾಪಸ್ ಕಳುಹಿಸಿದ ವಲಸಿಗರಲ್ಲಿ ಒಬ್ಬರು ಮಾಡಿರುವ ವಿಡಿಯೊ ಹಂಚಿಕೊಂಡ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಪ್ರಧಾನಿ ಅವರೇ, ಈ ವ್ಯಕ್ತಿಯ ನೋವನ್ನು ಆಲಿಸಿ. ಭಾರತೀಯರು ಘನತೆ ಮತ್ತು ಮಾನವೀಯತೆಗೆ ಅರ್ಹರು.
ಕೈಕೋಳಕ್ಕೆ ಅರ್ಹರಲ್ಲ' ಎಂದು ಹೇಳಿದರು.
'ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ತನ್ನ ದೇಶದ ಪ್ರಜೆಗಳನ್ನು ಕರೆಸಿಕೊಳ್ಳಲು ಕೊಲಂಬಿಯಾವು ವಿಶೇಷ ವಿಮಾನವನ್ನು ಕಳುಹಿಸಿದೆ. ಭಾರತ ಏಕೆ ಅಂತಹ ಕೆಲಸ ಮಾಡಿಲ್ಲ' ಎಂದು ರಾಜ್ಯಸಭೆ ಸದಸ್ಯರಾದ ರಣದೀಪ್ ಸುರ್ಜೇವಾಲಾ, ಸಾಕೇತ್ ಗೋಖಲೆ ಮತ್ತು ಜಾನ್ ಬ್ರಿಟ್ಟಾಸ್ ಅವರು ಪ್ರಶ್ನಿಸಿದರು.
ಕೈಗಳಿಗೆ ಸರಪಳಿ ಬಿಗಿದು ಪ್ರತಿಭಟನೆ
ವಲಸಿಗರನ್ನು ಕೆಟ್ಟದಾಗಿ ನಡೆಸಿಕೊಂಡದ್ದನ್ನು ಖಂಡಿಸಿ ವಿರೋಧ ಪಕ್ಷಗಳ ನಾಯಕರು ಗುರುವಾರ ಕಲಾಪಕ್ಕೂ ಮುನ್ನ ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎಡ ಪಕ್ಷಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕೆಲವು ಸಂಸದರು ತಮ್ಮ ಕೈಗಳಿಗೆ ಸಾಂಕೇತಿಕವಾಗಿ ಸರಪಳಿ ಬಿಗಿದು ಪ್ರತಿಭಟಿಸಿದರು.

ವಲಸಿಗರ ನೆರವಿಗೆ ಹೊಸ ಕಾನೂನು
ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರ 'ಸುರಕ್ಷಿತ ಮತ್ತು ಕ್ರಮಬದ್ಧ ವಲಸೆ'ಗೆ ನೆರವಾಗಲು ಹೊಸ ಕಾನೂನು ಜಾರಿಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಪ್ರಸ್ತಾವಿತ 'ಸಾಗರೋತ್ತರ ಸಂಚಾರ (ನೆರವು ಮತ್ತು ಕಲ್ಯಾಣ) ಮಸೂದೆ'ಯು 1983ರ ವಲಸೆ ಕಾಯ್ದೆಯ ಬದಲಿಗೆ ಜಾರಿಯಾಗಲಿದ್ದು, ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋಗುವವರ ಪ್ರಯಾಣವನ್ನು ಸುಗಮಗೊಳಿಸಲಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅಧ್ಯಕ್ಷತೆಯ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ ಈ ಮಸೂದೆಗೆ ಸಂಬಂಧಿಸಿದ ವಿವರ ಇದೆ.

