ಕಾಸರಗೋಡು: 2025-26ನೇ ಸಾಲಿನ ಕೇಳರಳ ಬಜೆಟನ್ನು ಶುಕ್ರವಾರ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲನ್ ವಿಧಾನಸಭೆಯಲ್ಲಿ ಮಂಡಿಸಿದರು. ಸಾಮಾಜಿಕ ಪಿಂಚಣಿ ಮೊತ್ತ ಹೆಚ್ಚಿಸಲಾಗುವ ಭರವಸೆ ಕೇರಳದ ಪಿಂಚಣಿದಾರರನ್ನು ನಿರಾಶೆಗೊಳಿಸಿದ್ದು, ಈ ವರೆಗಿನ ಬಾಕಿಯಿರಿಸಿಕೊಂಡಿರುವ ಪಿಂಚಣಿಮೊತ್ತವನ್ನು ಶೀಘ್ರ ವಿತರಿಸುವ ಭರವಸೆ ನೀಡಿದೆ. ಭೂಮಿ ತೆರಿಗೆ ಮತ್ತು ಇಲೆಕ್ಟ್ರಾನಿಕ್ ವಾಹನಗಳ ತೆರಿಗೆ ಹೆಚ್ಚಿಸಲಾಗಿದೆ.
152352ಕೋಟಿ ಆದಾಯ ಮತ್ತು 179476ಕೋಟಿ ರೂ. ಮೊತ್ತದ ಖರ್ಚು ಅಂದಾಜಿಸಿರುವ ಕೊರತೆ ಬಜೆಟ್ ಇದಾಗಿದೆ. ಈ ಬಾರಿಯೂ ಕಾಸರಗೋಡು ವೈದ್ಯಕೀಯ ಕಾಲೇಜನ್ನು ಅವಗಣಿಸಲಾಗಿದ್ದು, ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೂ ವಂಚನೆಯಾಗಿದೆ. ಲೈಫ್ ವಸತಿ ಯೋಜನೆಯನ್ವಯ ರಾಜ್ಯದಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣಕಾರ್ಯ ಪೂರ್ತೀಕರಿಸಲಾಗುವುದು. ಇದಕ್ಕಾಗಿ ಬಜೆಟ್‍ನಲ್ಲಿ 1160ಕೋಟಿ ರಊ. ಮೀಸಲಿರಿಸಲಾಗಿದೆ.
ಕಾಸರಗೋಡು ಮೈಲಾಟಿಯಲ್ಲಿ ಬ್ಯಾಟರಿ ಎನರ್ಜಿ ಸೋಲಾರ್ ಸಿಸ್ಟಂಘಟಕ ಆರಂಭಿಸಲಾಗುವುದು. ರಾಜ್ಯ ವಿದ್ಯುತ್ ಮಂಡಳಿಗೆ 1066.8ಕೋಟಿ, ಆರೋಗ್ಯ ವಲಯಕ್ಕೆ 10431.73ಕೋಟಿ, ರಸ್ತೆ-ಸೇತುವೆಗೆ 4219.41 ಕೋಟಿ, ಭತ್ತ ಕೃಷಿಗೆ 150ಕೋಟಿ, ಕೇರ ಯೋಜನೆಗೆ 100ಕೋಟಿ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಗೆ ರಾಜ್ಯದ ವತಿಯಿಂದ 80ಕೋಟಿ ಮೀಸಲಿರಿಸಲಾಗಿದೆ.
ಕಣ್ಣೂರು ಜಿಲ್ಲೆಯ ಧರ್ಮಡದಲ್ಲಿ 130ಕೋಟಿ ರೂ. ವೆಚ್ಚದಲ್ಲಿ ಗ್ಲೋಬಲ್ ಡೇರಿ ಫಾರ್ಮ್ ನಿರ್ಮಾಣಗೊಳ್ಳಲಿದೆ. ಕುಟುಂಬಶ್ರೀ ಮಿಷನ್‍ಗೆ 270ಕೋಟಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ 15980.41ಕೋಟಿ, ಪಂಪಾ ಸನ್ನಿದಾನ ಕಾಲ್ನಡೆ ಹಾದಿ ಅಭಿವೃದ್ಧಿಗೆ 75ಕೋಟಿ, ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ನೂರು ಕೋಟಿ, ಮಣ್ಣು ಸಂರಕ್ಷಣೆಗೆ77.9ಕೋಟಿ, ಕೃಷಿ ವಲಯಕ್ಕೆ227.40ಕೋಟಿ ರೂ. ಮೀಸಲಿರಿಸಲಾಗಿದೆ.



