ಬೂಸ್ಟನ್: ಅಮೆರಿಕದಲ್ಲಿ ನೆಲಸಿರುವ ಅಕ್ರಮ ವಲಸಿಗರ ಮಕ್ಕಳಿಗೆ ಜನ್ಮದತ್ತವಾಗಿ ಪೌರತ್ವ ಸಿಗುವುದನ್ನು ನಿರ್ಬಂಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕಾರಿ ಆದೇಶವನ್ನು ಸಿಯಾಟಲ್‌ನ ಫೆಡರಲ್ ನ್ಯಾಯಾಲಯವು ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿವರೆಗೆ ಗುರುವಾರ ರದ್ದು ಮಾಡಿದೆ.
ನಾಲ್ಕು ರಾಜ್ಯಗಳು ಮತ್ತು ವಲಸಿಗರ ಹಕ್ಕುಗಳ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಾನ್ ಕೂನೌರ್ ಅವರು, ಟ್ರಂಪ್ ಅವರು ಈ ಆದೇಶದ ಮೂಲಕ ಸಂವಿಧಾನವನ್ನು ಬದಲಾಯಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಇದಕ್ಕೂ ಮುನ್ನ ಬುಧವಾರ, ಮೇರಿಲ್ಯಾಂಡ್ ಫೆಡರಲ್ ನ್ಯಾಯಾಧೀಶರು ಇಂಥದ್ದೇ ಪ್ರತ್ಯೇಕ ಪ್ರಕರಣವೊಂದರ ಕುರಿತ ಆದೇಶಕ್ಕೆ ರಾಷ್ಟ್ರದಾದ್ಯಂತ ತಡೆ ನೀಡಿದ್ದರು.
ಬೂಸ್ಟನ್‌ನ ಫೆಡರಲ್ ನ್ಯಾಯಾಧೀಶರು ಸಹ ಟ್ರಂಪ್ ಅವರ ಆದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸುವ ಸಾಧ್ಯತೆ ಇದೆ.
ಸ್ಯಾನ್ ಫ್ರಾನ್ಸಿಸ್ಕೊ, ವಾಷಿಂಗ್ಟನ್ ಸೇರಿದಂತೆ ಹಲವು ನಗರಗಳ ಅಟಾರ್ನಿ ಜನರಲ್‌ಗಳು, ಟ್ರಂಪ್ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಧೀಶರಾದ ಲಿಯೊ ಸೊರೊಕಿನ್ ಅವರಿಗೆ ಮನವಿ ಮಾಡಿದ್ದಾರೆ.
ಸಂವಿಧಾನವೇ ಜನ್ಮದತ್ತ ಪೌರತ್ವಕ್ಕೆ ಅನುವು ಮಾಡಿಕೊಡುತ್ತದೆ. ಇದನ್ನು ರದ್ದುಪಡಿಸುವ ಆದೇಶ ನೀಡುವ ಹಕ್ಕು ಟ್ರಂಪ್ ಅವರಿಗೆ ಇಲ್ಲ. 'ಪೋಷಕರು ಅಕ್ರಮ ವಲಸಿಗರು ಎಂಬ ಕಾರಣಕ್ಕಾಗಿ ಅಮೆರಿಕದಲ್ಲಿ ಹುಟ್ಟಿದ ಸಾವಿರಾರು ಮಕ್ಕಳ ಪೌರತ್ವವನ್ನು ಕಸಿದು, ಅವರನ್ನು ಹೊರದಬ್ಬುವುದು ಕಾನೂನುಬಾಹಿರ ಪ್ರಯತ್ನ' ಎಂದು ಅವರು ವಾದಿಸಿದ್ದಾರೆ.




