ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮೂರು ಕರಾವಳಿ ಪಂಚಾಯತಿಗಳಲ್ಲಿ ಕರಾವಳಿ ಕಾನೂನಿನಲ್ಲಿ ಸಡಿಲಿಕೆ ಪಡೆಯಲು ಸಾಧ್ಯವಾಗದಿರುವುದು ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಎಂದು ಶಿರಿಯ ಗ್ರಾಮಾಭಿüವೃದ್ಧಿ ಸಮಿತಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಗುರುವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕರಾವಳಿ ನಿರ್ವಹಣಾ ಕಾಯ್ದೆಯಲ್ಲಿ(ಸಿ.ಆರ್.ಝಡ್) ಕೇಂದ್ರದ ವಿನಾಯಿತಿಗಳ ಭಾಗವಾಗಿ ರಾಜ್ಯವು ಸಿದ್ಧಪಡಿಸಿದ ಕರಡು ಕೇರಳದ 66 ಪಂಚಾಯತಿಗಳಿಗೆ ವಿನಾಯಿತಿ ನೀಡಿದ್ದರೂ, ಮಂಜೇಶ್ವರ ಕರಾವಳಿ ಪ್ರದೇಶದ ಮಂಜೇಶ್ವರ, ಮಂಗಲ್ಪಾಡಿ ಮತ್ತು ಕುಂಬಳೆ ಪಂಚಾಯತಿಗಳನ್ನು ಹೊರಗಿರಿಸಿದ್ದನ್ನು ಮರುಪರಿಶೀಲಿಸಬೇಕು. ಸಮೀಪದ ಮೊಗ್ರಾಲ್ ಪುತ್ತೂರು ಪಂಚಾಯತಿ ವಿನಾಯಿತಿ ಪಡೆದಾಗ ಹತ್ತಿರದ ಪಂಚಾಯತಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಇದು ಕರಾವಳಿ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಈ ವಿಷಯದ ಬಗ್ಗೆ ಸರ್ಕಾರ ಕರಡು ಸಿದ್ಧಪಡಿಸುವಾಗ ಜನಪ್ರತಿನಿಧಿಗಳು ಮತ್ತು ಪಂಚಾಯತಿ ಆಡಳಿತ ಮಂಡಳಿಗಳು ಸಾಕಷ್ಟು ಗಮನ ಹರಿಸಲಿಲ್ಲ ಎಂಬ ಬಲವಾದ ಆರೋಪವಿದೆ.
ಮಂಜೇಶ್ವರ, ಮಂಗಲ್ಪಾಡಿ ಮತ್ತು ಕುಂಬಳೆ ಕರಾವಳಿ ಪಂಚಾಯತಿಗಳು ಜನನಿಬಿಡ ಕರಾವಳಿ ಪ್ರದೇಶಗಳಾಗಿವೆ. ವಿನಾಯಿತಿ ನೀಡಿದ್ದರೆ, ನಿರ್ಮಾಣ ಚಟುವಟಿಕೆಗಳಿಗೆ ಇನ್ನೂರು ಮೀಟರ್‍ಗಳನ್ನು ಐವತ್ತಕ್ಕೆ ಇಳಿಸಲಾಗುತ್ತಿತ್ತು. ಇದಕ್ಕೆ ಕಾರಣ ಸಾರ್ವಜನಿಕರು ಸೇರಿದಂತೆ ಜನಪ್ರತಿನಿಧಿಗಳ ಸಂಪೂರ್ಣ ಜಾಗರೂಕತೆಯ ಕೊರತೆ.
ಕಾನೂನಿನಲ್ಲಿ ಸಡಿಲಿಕೆ ನಿರೀಕ್ಷಿಸುತ್ತಿರುವ ಕರಾವಳಿ ನಿವಾಸಿಗಳ ಆತಂಕವನ್ನು ನಿವಾರಿಸಲು ಸಂಬಂಧಪಟ್ಟವರು ಸಿದ್ಧರಾಗಿರಬೇಕು, ಇಲ್ಲದಿದ್ದರೆ ಶಿರಿಯ ಗ್ರಾಮ ಸಮಿತಿಯು ಪ್ರಬಲ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಎಚ್ಚರಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಸಂಸದರು ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದರು.
ಪತ್ರಿಕಾಗೋಷ್ಠ್ಠಿಯಲ್ಲಿ ಶಿರಿಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ಬಾಸ್ ಕೆ.ಎಂ. ವಾನಂದೆ, ಸಂಚಾಲಕ ಮಸೂದ್ ಶಿರಿಯ ಮತ್ತು ಉಪಾಧ್ಯಕ್ಷ ಜಲೀಲ್ ಶಿರಿಯ ಉಪಸ್ಥಿತರಿದ್ದರು.

.jpg)

