ಬದಿಯಡ್ಕ: ಕಳೆದ ಮಂಗಳವಾರ ಹಾಡುಹಗಲೇ ನೀರ್ಚಾಲು ಹೃದಯ ಭಾಗದ ರಾಘವೇಂದ್ರ ಆಯುರ್ವೇದ ಮದ್ದಿನಂಗಡಿ ಮಾಲಕಿ ಸರೋಜಿನಿ ಎಸ್.ಎನ್.ಭಟ್ ಅವರ ಕುತ್ತಿಗೆಯಿಂದ ಮೂರೂವರೆ ಪವನ್ ಚಿನ್ನಾಭರಣ ದೋಚಿದ ಘಟನೆ ನಡೆದಿದ್ದು, ಬಳಿಕ ನಡೆಸಿದ ತನಿಖೆಯಿಂದ ಯಾವುದೇ ಪ್ರಯೋಜನವಾಗದೆ, ಕೃತ್ಯ ನಡೆಸಿದವರ ಪತ್ತೆ ಮರೀಚಿಕೆಯಾಗಿದೆ.
ಘಟನೆಯ ತನಿಖೆಗೆ ಪ್ರಧಾನ ನೆರವು ನೀಡಬೇಕಿದ್ದ ನೀರ್ಚಾಲು ಪೇಟೆಯ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆಗೆ ನಾಗರಿಕರು ಒತ್ತಾಯಿಸಿದ್ದು, ಪೋಲೀಸರು ನುಣುಚಿಕೊಳ್ಳುತ್ತಿರುವುದು ಕಂಡುಬಂದಿದೆ.
ಸಿಸಿ ಟಿವಿಗೆ ಏನಾಯಿತು:
ನೀರ್ಚಾಲು ಪೇಟೆಯಲ್ಲಿ ಸುಮಾರು ಐದು ವರ್ಷಗಳ ಹಿಂದೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ಪರವಾಗಿ ಐದು ಕ್ಯಾಮರಾ ಅಳವಡಿಸಲಾಗಿತ್ತು. ಬದಿಯಡ್ಕ ಪೋಲೀಸ್ ಠಾಣೆಗೆ ನೇರ ಸಂಪರ್ಕ ಕಲ್ಪಿಸಲು ವೈಫೈ, 32 ಇಂಚಿನ ಡಿಪ್ಸ್ಲೇ ಸಹಿತ ಐದು ಲಕ್ಷ ರೂ.ಗಳನ್ನು ವ್ಯಾಪಾರಿಗಳ ಸಂಘಟನೆಯೇ ಭರಿಸಿತ್ತು.
ಆದ್ದೇನು?:
ಆದರೆ, ಪ್ರತಿಯೊಬ್ಬರೂ ಗ್ರಹಿಸಿದ್ದು, ಸಿಸಿ ಟಿವಿ ಕಾರ್ಯಾಚರಿಸುತ್ತಿದೆ ಎಂದಾಗಿದೆ. ಆದರೆ, ಮಂಗಳವಾರ ನಡೆದ ಕಳವಿನ ಬಳಿಕ ಪೋಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಯಾಕೆ ಪರಿಶೀಲಿಸುತ್ತಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿದಂತೆ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೋಲೀಸರು ಸತ್ಯ ಬಿಚ್ಚಿಟ್ಟರು.
ವ್ಯಾಪಾರಿಗಳು ಊರ ನಾಗರಿಕರ, ವ್ಯಾಪಾರೋದ್ಯಮಗಳ ಸುರಕ್ಷತೆಗಾಗಿ ಸ್ವಂತ ವೆಚ್ಚದಲ್ಲಿ ನಿರ್ಮಿಸಿದ್ದ ಸಿಸಿ ಟಿವಿ ಕ್ಯಾಮಾರ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಪೋಲೀಸ್ ಇಲಾಖೆ ಲೋಪವೆಸಗಿರುವುದು ಈ ಮೂಲಕ ಸಾಬೀತುಗೊಂಡಿದೆ. ನಾಗರಿಕರ ಸಂರಕ್ಷಣೆ ಮಾಡಬೇಕಾದ ಪೋಲೀಸರೇ ಬೇಲಿಯೇ ಹೊಲಮೇಯ್ದಂತೆ ಕ್ಯಾಮರಾ ವಂಚನೆ ನಡೆಸಿರುವುದು ನಾಗರಿಕರನ್ನು ರೊಚ್ಛಿಗೆಬ್ಬಿಸಿದೆ. ಹಾನಿಗೊಂಡಿರುವ ಕ್ಯಾಮರಾ ವ್ಯವಸ್ಥೆ ಪುನಃಸ್ಥಾಪಿಸದಿದ್ದರೆ ಪೋಲೀಸರನ್ನು ರಿಪೇರಿ ಮಾಡಬೇಕಾದಿತೆಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
ಪ್ರದೇಶದ ಅಭದ್ರತೆ:
ನೀರ್ಚಾಲು ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿ ಶಾಲೆ, ಕಾಲೇಜು, ಒಂದು ರಾಷ್ಟ್ರೀಕೃತ ಬ್ಯಾಂಕ್, ಒಂದು ಶೆಡ್ಯೂಲ್ಡ್ ಬ್ಯಾಂಕ್, ಮತ್ತೊಂದು ಸೇವಾ ಸಹಕಾರಿ ಸೊಸೈಟಿ, ಕ್ಷೀರ ಸೊಸೈಟಿ, ಭಜನಾ ಮಂದಿರ, ಮಸೀದಿ, ಅಂಗಡಿ ಮುಗ್ಗಟ್ಟುಗಳು, ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯ,ಅಕ್ಷಯ ಕೇಂದ್ರ, ಔಷಧಿ ಅಂಗಡಿಗಳೇ ಮೊದಲಾದ ಉದ್ಯಮಗಳೂ, ಉದ್ಯಮೇತರ ಸೇವಾ ಘಟಕಗಳೂ ಇರುವಲ್ಲಿ ಕಂಡುಬಂದಿರುವ ಭದ್ರತಾ ಲೋಪ, ಅಭದ್ರತೆ ತೀವ್ರ ಟೀಕೆಗೆ ಕಾರಣವಾಗಿದೆ.
ಅಭಿಮತ:
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಲಕ್ಷಾಂತರ ರೂ.ವ್ಯಯಿಸಿ ವ್ಯವಸ್ಥೆಗೊಳಿಸಿದ್ದ ಸಿಸಿ ಟಿವಿ, ಕ್ಯಾಮರಾ. ಠಾಣೆಯಲ್ಲಿ ವೀಕ್ಷಿಸಲು ಡಿಪ್ಸ್ಲೇ ಗಳನ್ನೆಲ್ಲ ಪೋಲೀಸರೇ ಬುಡಮೇಲುಗೊಳಿಸಿರುವುದು ಖಂಡನೀಯ. ಈ ಬಗ್ಗೆ ಉನ್ನತ ಪೋಲೀಸ್ ಅಧಿಕೃತರಿಗೆ ದೂರು ನೀಡಲಾಗುವುದು .
-ಸುಬ್ರಹ್ಮಣ್ಯ ಭಟ್
ಅಧ್ಯಕ್ಷರು.ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕ.

.jpg)
.jpg)
.jpg)

