ಮಂಜೇಶ್ವರ: ಬೈಕೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಘಟನೆ ಬುಧವಾರ ರಾತ್ರಿ ಬೋಳಿಯಾರಿನಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವರ್ಕಾಡಿ ಗ್ರಾಮದ ನಲ್ಲೆಂಗಿ ನಿವಾಸಿ ದಿ. ಹೆನ್ರಿ ಮೊರಾಸ್ - ಲಿಲ್ಲಿ ಡಿ' ಸೋಜಾ ದಂಪತಿಯ ಪುತ್ರ ರೋಷನ್ ಮೋರಸ್ (34) ಮೃತಪಟ್ಟ ಯುವಕನಾಗಿದ್ದಾನೆ.
ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ರೋಷನ್ ಬಿಸಿ ರೋಡ್ ನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಬೋಳಿಯಾರಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರೋಷನ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯರು ತಕ್ಷಣ ಮಂಗಳೂರಿನ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಮತ್ತೆ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹವನ್ನು ಶವ ಮಹಜರು ನಡೆಸಿ ಅಪರಾಹ್ನ 12. ಗಂಟೆಗೆ ಮನೆಗೆ ತರಲಾಗುವುದು. ಸಂಜೆ 3.30 ಕ್ಕೆ ವರ್ಕಾಡಿ ಚರ್ಚ್ ನಲ್ಲಿ ಅಂತ್ಯ ಕ್ರಿಯೆಯ ವಿಧಿ ವಿಧಾನಗಳು ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.
ಮೃತಪಟ್ಟ ರೋಷನ್ ಮೋರಸ್ ವರ್ಕಾಡಿ ಏಸು ಕ್ರಿಸ್ತರ ಕಿರುಹೃದಯ ದೇವಾಲಯದ ಐ. ಸಿ. ವೈ.ಎಂ ನ ಮಾಜಿ ಸದಸ್ಯ, ವರ್ಕಾಡಿ ಕಥೋಲಿಕ್ ಸಭಾದ ಸದಸ್ಯ, ಫ್ರೆಂಡ್ಸ್ ವರ್ಕಾಡಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನ ಸಕ್ರೀಯ ಸದಸ್ಯನಾಗಿ, ಕ್ರಿಕೆಟ್ ಆಟಗಾರನಾಗಿ ಚಿರಪರಿಚಿತ ನಾಗಿದ್ದನು. ಮೃತರು ತಾಯಿ, ಪತ್ನಿ: ಪ್ರಮೀಳಾ ಲೂಯಿಸ್, ಪುತ್ರಿ: ರಿವಲ್ ಪರ್ಲ್ ಮೊರಸ್, ಸಹೋದರಿಯರಾದ: ಮರಿನಾ ಮೊರಸ್, ರೆನಿಟಾ ಮೊರಸ್ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಪ್ರಕರಣ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

