ಮುಂಬೈ: ಭಾರತದ ಉತ್ಪನ್ನಗಳ ಮೇಲಿನ ಹೆಚ್ಚುವರಿ ಆಮದು ಸುಂಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕವಾಗಿ ವಿನಾಯ್ತಿ ನೀಡುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಶುಕ್ರವಾರ (ಏ.11) ಭಾರತದ ಷೇರುಮಾರುಕಟ್ಟೆ ವಹಿವಾಟು ಭರ್ಜರಿ ಏರಿಕೆಯೊಂದಿಗೆ ಮುಂದುವರಿದಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ ಬರೋಬ್ಬರಿ 1,542 ಅಂಕಗಳಷ್ಟು ಜಿಗಿತದೊಂದಿಗೆ 75,390 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 487 ಅಂಕಗಳಷ್ಟು ಏರಿಕೆಯಾಗಿದ್ದು, 22,886 ಅಂಕಗಳ ಮಟ್ಟಕ್ಕೆ ತಲುಪಿದೆ.
ಸೂಚ್ಯಂಕ ಮತ್ತು ನಿಫ್ಟಿ ಏರಿಕೆಯ ಪರಿಣಾಮ ಮಹೀಂದ್ರ & ಮಹೀಂದ್ರ, ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಎಲ್ & ಟಿ ಮತ್ತು ಆಕ್ಸಿಸ್ ಬ್ಯಾಂಕ್, ಬಜಾಜ್ ಆಟೋ, ಗ್ರಾಸಿಂ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ.
ಭಾರತ ಸೇರಿದಂತೆ ಜಗತ್ತಿನ 75 ದೇಶಗಳ ಮೇಲೆ ಹೇರಿದ್ದ ಬೃಹತ್ ಮೊತ್ತದ ಪ್ರತಿಸುಂಕದ ಹೊರೆಯನ್ನು 90 ದಿನಗಳವರೆಗೆ ವಿನಾಯ್ತಿ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಷೇರುಪೇಟೆ ಮತ್ತೆ ಪುಟಿದೇಳಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮತ್ತೊಂದೆಡೆ ಜಪಾನ್ ಷೇರುಪೇಟೆಯ ನಿಕ್ಕೈ ಶೇ.4.55ರಷ್ಟು ಕುಸಿತ ಕಂಡಿದ್ದು, ದಕ್ಷಿಣ ಕೊರಿಯಾದ ಕೋಸ್ಪಿ ಕೂಡಾ ಶೇ.1.66ರಷ್ಟು ಇಳಿಕೆಯೊಂದಿಗೆ ವಹಿವಾಟು ಆರಂಭಿಸಿದ್ದು, ಆಸ್ಟ್ರೇಲಿಯಾದ ಷೇರುಪೇಟೆ ವಹಿವಾಟು ಕುಸಿತ ಕಂಡಿರುವುದಾಗಿ ಮಾರುಕಟ್ಟೆ ವರದಿ ತಿಳಿಸಿದೆ.




