HEALTH TIPS

ಉಗ್ರರ ದಾಳಿಗೆ ಖಂಡನೆ: ಜಮ್ಮು & ಕಾಶ್ಮೀರದಲ್ಲಿ 35 ವರ್ಷಗಳ ನಂತರ ಬಂದ್

ಶ್ರೀನಗರ: ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ ಸಮೀಪ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂದು (ಬುಧವಾರ) ಬಂದ್‌ ನಡೆಸಲಾಗುತ್ತಿದೆ. 35 ವರ್ಷಗಳ ಬಳಿಕ ನಡೆಯುತ್ತಿರುವ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್ ಪಟ್ಟಣ ಸಮೀಪದ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ 28 ಮಂದಿ ಮೃತಪಟ್ಟು, ಕನಿಷ್ಠ 20 ಜನರು ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ, ಕಣಿವೆಯಾದ್ಯಂತ ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಉಗ್ರರ ದಾಳಿಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ - ಧಾರ್ಮಿಕ ಸಂಘಟನೆಗಳು, ವ್ಯಾಪಾರ ಸಂಸ್ಥೆಗಳು ಕಾಶ್ಮೀರದಾದ್ಯಂತ ಬಂದ್‌ಗೆ ಕರೆ ನೀಡಿದ್ದವು.

ಆಡಳಿತ ಪಕ್ಷ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ), ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ), ಪೀಪಲ್ಸ್‌ ಕಾನ್ಫರೆನ್ಸ್‌ ಹಾಗೂ ಅಪ್ನೀ ಪಾರ್ಟಿ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿವೆ. ಕಾಶ್ಮೀರದ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ, ವ್ಯಾಪಾರಿಗಳು ಮತ್ತು ತಯಾರಕರ ಒಕ್ಕೂಟ ಸೇರಿದಂತೆ ಕಣಿವೆಯ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಂಸ್ಥೆಗಳೂ ಬೆಂಬಲ ಘೋಷಿಸಿವೆ.

ಸಂತ್ರಸ್ತರು ಹಾಗೂ ಅವರ ಕುಟುಂಬದವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ಒಗ್ಗಟ್ಟಿನ ಸಂಕೇತವಾಗಿ ಶಾಲೆಗಳನ್ನು ಮುಚ್ಚುವುದಾಗಿ ಜಮ್ಮು ಮತ್ತು ಕಾಶ್ಮೀರ ಖಾಸಗಿ ಶಾಲೆಗಳ ಸಂಘ ತಿಳಿಸಿದೆ.

ಬುಧವಾರ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಕಾಶ್ಮೀರ ವಿಶ್ವವಿದ್ಯಾಲಯ ಮುಂದೂಡಿದೆ.

ಉಗ್ರರ ದಾಳಿ ಖಂಡಿಸಿ, ಬಂದ್‌ಗೆ ಬೆಂಬಲ ನೀಡವಂತೆ 'ಮುತಾಹಿದ ಮಜ್ಲಿಸ್‌ ಉಲೇಮಾ' ಸಂಘಟನೆ ಕಾಶ್ಮೀರ ಜನರಿಗೆ ಮನವಿ ಮಾಡಿದೆ.

ಶ್ರೀನಗರದಲ್ಲಿ ಬಹುತೇಕ ಮಳಿಗೆಗಳು, ಪೆಟ್ರೋಲ್‌ ಬಂಕ್‌ಗಳು, ವಾಣಿಜ್ಯ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳಷ್ಟೇ ತೆರೆದಿವೆ. ಖಾಸಗಿ ವಾಹನಗಳು ಎಂದಿನಂತೆ ಸಂಚರಿಸುತ್ತಿವೆಯಾದರೂ, ಸಾರ್ವಜನಿಕ ಸಾರಿಗೆ ವಾಹನ ಸಂಚಾರ ವಿರಳವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಗ್ರರ ಕೃತ್ಯವನ್ನು ಖಂಡಿಸಿ ಹಲವು ಪ್ರದೇಶಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು, ಅಮಾಯಕರ ಹತ್ಯೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಇತರ ಜಿಲ್ಲಾ ಕೇಂದ್ರಗಳಲ್ಲಿಯೂ ಬಂದ್‌ ಪರಿಣಾಮ ಕಂಡುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries