ಲಖನೌ: ನ್ಯಾಯಾಲಯಕ್ಕೆ ಬರುವಾಗ ವಕೀಲರ ಉಡುಪು ಧರಿಸದೇ, ಅಂಗಿಯ ಗುಂಡಿ ಹಾಕದೇ ಬಂದ ಕಾರಣಕ್ಕೆ ಅಲಹಾಬಾದ್ ಹೈಕೋರ್ಟ್ ವಕೀಲರೊಬ್ಬರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
2021ರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಸರಿಯಾದ ಉಡುಪು ಧರಿಸದೇ ಬಂದ ಸ್ಥಳೀಯ ವಕೀಲ ಅಶೋಕ್ ಪಾಂಡೆ ವಿರುದ್ಧ ಕೋರ್ಟ್ ಈ ಕ್ರಮ ಕೈಗೊಂಡಿದೆ.
ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಬಿ.ಆರ್. ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠ, 'ಹಿಂದಿನ ನಡವಳಿಕೆ ಮತ್ತು ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಪಾಂಡೆ ಅವರಿಗೆ ಇತರರಿಗೆ ಪಾಠವಾಗುವಂತಹ ಶಿಕ್ಷೆ ನೀಡಲಾಗಿದೆ' ಎಂದು ಹೇಳಿದೆ.
ಪಾಂಡೆ ಅವರಿಗೆ ₹2 ಸಾವಿರ ದಂಡವನ್ನೂ ವಿಧಿಸಿರುವ ನ್ಯಾಯಪೀಠ, ದಂಡ ಪಾವತಿಸಲು ವಿಫಲವಾದರೆ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆದೇಶಿಸಿದೆ.
ಇದಲ್ಲದೆ, ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಖನೌ ಪೀಠದಲ್ಲಿ ವಕೀಲಿ ವೃತ್ತಿಯಿಂದ ನಿಮ್ಮನ್ನು (ಪಾಂಡೆ) ಏಕೆ ನಿರ್ಬಂಧಿಸಬಾರದು ಎಂದು ಪ್ರಶ್ನಿಸಿ, ಪಾಂಡೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಪೀಠ, ಮೇ 1ರವರೆಗೆ ಪ್ರತಿಕ್ರಿಯಿಸಲು ಅವಕಾಶ ನೀಡಿದೆ.




