ಕೋಝಿಕ್ಕೋಡ್: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತದ ಶಾಂತಿಯುತ ಜೀವನದ ಮೇಲೆ ನಡೆದ ಘೋರ ದಾಳಿಯಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಪ್ರಪಂಚದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದ ಸಮಯದಲ್ಲಿ ಈ ದಾಳಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕಾಶ್ಮೀರಕ್ಕೆ ಜನರ ಹರಿವನ್ನು ನಿಲ್ಲಿಸುವುದು, ಅವರನ್ನು ಹೆದರಿಸಿ, ಅಲ್ಲಿನ ಶಾಂತಿಯುತ ವಾತಾವರಣವನ್ನು ನಾಶಪಡಿಸುವುದು, ಕಾಶ್ಮೀರಿಗಳನ್ನು ತೊಂದರೆಗೀಡಾದ ಜೀವನಕ್ಕೆ ತಳ್ಳುವುದು ಈ ದಾಳಿಯ ಉದ್ದೇಶವಾಗಿದೆ.ಭಯೋತ್ಪಾದನೆಯಿಂದ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ. ದೇಶವು ಅಂತಹ ಪ್ರವೃತ್ತಿಗಳಿಗೆ ಮಣಿದಿಲ್ಲ. ಅಪರಾಧಿಗಳನ್ನು ಹಿಡಿದು ಶಿಕ್ಷಿಸುವುದರ ಜೊತೆಗೆ, ಕಾಶ್ಮೀರಿಗಳ ಜೀವನವನ್ನು ಸುಲಭವಾಗಿ ಅವರ ಹಿಂದಿನ ವೈಭವಕ್ಕೆ ಮರಳಿಸುವ ಪ್ರಯತ್ನಗಳೂ ಆಗಬೇಕು. ದಾಳಿಯಿಂದ ಆಘಾತಕ್ಕೊಳಗಾಗಿದ್ದೇನೆ ಮತ್ತು ಸಾವನ್ನಪ್ಪಿದವರ ಕುಟುಂಬಗಳು ಮತ್ತು ಪ್ರೀತಿಪಾತ್ರರ ದುಃಖವನ್ನು ಹಂಚಿಕೊಂಡಿದ್ದೇನೆ ಎಂದು ಗ್ರಾಂಡ್ ಮುಫ್ತಿ ಹೇಳಿರುವರು.




