ಕೊಲ್ಲಂ: ಮಾಜಿ ಸರ್ಕಾರಿ ವಕೀಲ ಪಿ.ಜಿ.ಮನು ಕಿರುಕುಳ ದೂರು ದಾಖಲಿಸಿದ ಮಹಿಳೆಯ ಪತಿಯನ್ನು ಕೊಲ್ಲಂ ಪಶ್ಚಿಮ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಕ್ಕೊಳಗಾದ ಮನು ಬಳಿಕ ಆತ್ಮಹತ್ಯೆ ಮಾಡಿಕೊಂಡರು.
ಬಂಧಿತ ವ್ಯಕ್ತಿ ಪಿರಾವತ್‍ನಲ್ಲಿ ಅಡಗಿಕೊಂಡಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. ವಕೀಲ ಮನು ಮಹಿಳೆಯ ಕುಟುಂಬದವರಲ್ಲಿ ಕ್ಷಮೆಯಾಚಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದವನು ಅವನೇ ಎಂದು ಪೋಲೀಸರು ನಂಬಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಯಿತು.
ಕಾನೂನು ಸಹಾಯ ಕೋರಿದ ಸಂತ್ರಸ್ಥೆಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪಿ.ಜಿ. ಮನುಗೆ ನ್ಯಾಯಾಲಯ ಜಾಮೀನು ನೀಡಿತ್ತು. ಏತನ್ಮಧ್ಯೆ, ಮತ್ತೊಬ್ಬ ಯುವತಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಳು. ಈ ಮಧ್ಯೆ, ಮನು ಯುವತಿಯ ಕುಟುಂಬದೊಡನೆ ಕ್ಷಮೆಯಾಚಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಮನುವಿನ ಮೇಲೆ ದೊಡ್ಡ ಪರಿಣಾಮ ಬೀರಿತು. ಮಹಿಳೆಯ ಪತಿ ವಿಡಿಯೋವನ್ನು ಉಲ್ಲೇಖಿಸಿ ಮನುಗೆ ನಿರಂತರವಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.





