ಕಾಸರಗೋಡು: ಮುಲ್ಕಿ ಕೊಳ್ನಾಡು ನಿವಾಸಿ, ಮಂಗಳೂರಿನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಮಹಮ್ಮದ್ ಶೆರೀಪ್(52)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಸುರತ್ಕಲ್ ಕಲ್ಲಾಪು ನಿವಾಸಿ ಅಭಿಷೇಕ್ ಶೆಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಅಡ್ಕಪಳ್ಳದ ಪಾಳುಬಾವಿಯಲ್ಲಿ ಏ.10ರಂದು ಮಹಮ್ಮದ್ ಶೆರೀಪ್ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯನ್ವಯ ಮಂಜೇಶ್ವರ ಠಾಣೆ ಪೊಲೀಸರು ಮೃತದೇಹ ಮೇಲಕ್ಕೆತ್ತಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದರು. ಶವಮಹಜರು ವರದಿಯಲ್ಲಿ ಕೊಲೆಕೃತ್ಯವೆಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಸ್‍ಪೆಕ್ಟರ್ ಅನೂಪ್ ನೇತೃತ್ವದ ಪೊಲೀಸರ ತಂಡ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪೂರ್ವದ್ವೇಷ ಕೊಲೆಗೆ ಕಾರಣವಾಗಿದ್ದು, ಅಭಿಷೇಕ್ ಶೆಟ್ಟಿ ಹೊರತುಪಡಿಸಿ ಇತರ ಆರೋಪಿಗಳು ಶಾಮೀಲಾಗಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




