ನವದೆಹಲಿ: 'ಕಳಂಕ ಇಲ್ಲದವರು' ಎಂದು ಸಿಬಿಐ ಹೇಳಿರುವ ಶಿಕ್ಷಕರ ಸೇವೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
ಪಶ್ಚಿಮ ಬಂಗಾಳದ ವಿವಿಧ ಶಾಲೆಗಳಿಗೆ ನಡೆದ 25,753 ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಇಡೀ ನೇಮಕಾತಿ ಪ್ರಕ್ರಿಯೆಯು ಕಳಂಕಿತವಾಗಿದೆ ಎಂದು ಹೇಳಿದ್ದ ಕೋರ್ಟ್, ಅಷ್ಟೂ ನೇಮಕಾತಿಗಳನ್ನು ಈಚೆಗೆ ಅಸಿಂಧುಗೊಳಿಸಿತ್ತು.
ರಾಜ್ಯದ ಹಲವು ಶಾಲೆಗಳಲ್ಲಿ ಬೋಧನೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ, ಹೊಸದಾಗಿ ಶಿಕ್ಷಕರ ನೇಮಕ ಮಾಡಲು ಸಮಯ ಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ನೀಡಿದ ವಿವರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ದಾಖಲಿಸಿಕೊಂಡಿತು.
ಆದರೆ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 'ಸಿ' ಮತ್ತು 'ಡಿ' ದರ್ಜೆ ನೌಕರರ ಸೇವೆಯನ್ನು ವಿಸ್ತರಿಸಲು ಪೀಠವು ಒಪ್ಪಲಿಲ್ಲ.
ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ ಉದ್ಯೋಗ ಕಳೆದುಕೊಂಡ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದರು.
'ಕೋರ್ಟ್ ಆದೇಶದಿಂದಾಗಿ ನಮಗೆ ಸಂತಸವಾಗಿದೆ... ಸಮಾಧಾನ ಆಗಿದೆ. ಚಿಂತೆ ಬೇಡ ಎಂದು ನಾನು ಶಿಕ್ಷಕರಿಗೆ ಮನವಿ ಮಾಡುತ್ತಿದ್ದೇನೆ, ಸಮಸ್ಯೆ ಪರಿಹಾರವಾಗುತ್ತದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.




