ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣದ ವಿಚಾರಣೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಗುರುವಾರ ನಾಲ್ವರು ಆರೋಪಿಗಳಿಗೆ ನೋಟಿಸ್ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠವು ಇ.ಡಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಲ್ಲಿಸಿದ್ದ ಕೋರಿಕೆ ಗಮನಿಸಿ, ಆರು ವಾರಗಳಲ್ಲಿ ಉತ್ತರಿಸುವಂತೆ ಆರೋಪಿಗಳಿಗೆ ನೋಟಿಸ್ ನೀಡಿದೆ.
ಈ ಪ್ರಕರಣದ ಉಳಿದ ಇತರ ಆರೋಪಿಗಳನ್ನು ಪಕ್ಷಗಾರರನ್ನಾಗಿ ಮಾಡುವಂತೆ ಇ.ಡಿಯು ಅರ್ಜಿಯಲ್ಲಿ ಕೋರಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದ್ದಾರೆ.
ಪ್ರಸ್ತುತ, ಇ.ಡಿ ತನ್ನ ಅರ್ಜಿಯಲ್ಲಿ ಪಿ.ಎಸ್. ಸರಿತ್, ಸ್ವಪ್ನಾ ಪ್ರಭಾ ಸುರೇಶ್, ಸಂದೀಪ್ ನಾಯರ್ ಮತ್ತು ಎಂ. ಶಿವಶಂಕರ್ ಅವರನ್ನು ಪಕ್ಷಕಾರರನ್ನಾಗಿ ಮಾಡಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ವಿಚಾರಣೆಯನ್ನು ಕೇರಳದಿಂದ ಕರ್ನಾಟಕಕ್ಕೆ ವರ್ಗಾಯಿಸುವಂತೆ ಕೋರಿ 2022ರಲ್ಲಿ ಇ.ಡಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ.




