ತಿರುವನಂತಪುರ: ರಷ್ಯಾದ ಸೇನೆಯಲ್ಲಿ ಕೂಲಿ ಸೈನಿಕನಾಗಿ ವರ್ಷದಿಂದ ಸಿಲುಕಿಕೊಂಡಿದ್ದ ಮಲಯಾಳಿ ಯುವಕ ಜೈನ್ ಕುರಿಯನ್ (27) ಕೊನೆಗೂ ತನ್ನ ಮನೆಗೆ ಮರಳಿದ್ದಾರೆ.
ರಷ್ಯಾ- ಉಕ್ರೇನ್ ನಡುವಿನ ಯುದ್ಧದಲ್ಲಿ ಉಂಟಾದ ಗಂಭೀರ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಅವರು ಗುರುವಾರ ತನ್ನೂರಿಗೆ ಮರಳಿ ಬಂದಿದ್ದಾರೆ.
'ಮತ್ತೆ ನನ್ನನ್ನು ಯುದ್ಧವಲಯಕ್ಕೆ ಕಳುಹಿಸುವ ಸಾಧ್ಯತೆಯಿದೆ. ಹೀಗಾಗಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ನೆರವು ನೀಡಿ' ಎಂದು ಕುರಿಯನ್ ಅವರು ಕೇಂದ್ರ ಸರ್ಕಾರವನ್ನು ಕೋರಿ ಎಸ್‌ಒಎಸ್ ಸಂದೇಶ ಕಳುಹಿಸಿದ್ದರು. ರಷ್ಯಾದಲ್ಲಿನ ಮಲಯಾಳಿ ಸಂಘದ ನೆರವಿನಿಂದ ಅವರು ಭಾರತಕ್ಕೆ ಹಿಂತಿರುಗಲು ಸಾಧ್ಯವಾಗಿದೆ.
'ನನ್ನ ಕುಟುಂಬವನ್ನು ಮರಳಿ ಸೇರುತ್ತೇನೆ ಎಂದು ನಿರೀಕ್ಷಿಸಿಯೇ ಇರಲಿಲ್ಲ. ರಷ್ಯಾದ ಸೇನೆಯು ಪುನಃ ಶಿಬಿರಕ್ಕೆ ಹೋಗುವಂತೆ ನನಗೆ ತಿಳಿಸಿತ್ತು. ಆದರೆ ಅಲ್ಲಿನ ಮಲಯಾಳಿ ಸಂಘಟನೆಯವರು ಮಾಡಿದ ನೆರವಿನಿಂದ ಮನೆಗೆ ಮರಳಲು ಸಾಧ್ಯವಾಗಿದೆ' ಎಂದು ಕುರಿಯನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ರಷ್ಯಾ- ಉಕ್ರೇನ್ ಯುದ್ಧ ವಲಯದಲ್ಲಿ ಕುರಿಯನ್ ಅವರ ಸಂಬಂಧಿ ಬಿನಿಲ್ ಬಾಬು (32) ಅವರು ಜನವರಿ 4ರಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದರೆ ನಿರಂತರ ಮನವಿಗಳು ಹೊರತಾಗಿಯೂ ಅವರ ಮೃತದೇಹದ ಹಸ್ತಾಂತರ ಆಗಿಲ್ಲ. ತ್ರಿಶ್ಶೂರ್ ಮೂಲದ ಮತ್ತೊಬ್ಬರಾದ ಸಂದೀಪ್ ಅವರು ಯುದ್ಧ ವಲಯದಲ್ಲಿ ಮೃತಪಟ್ಟಿದ್ದರು. ಅವರ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಬಿನಿಲ್ ಹಾಗೂ ಜೈನ್ ಕುರಿಯನ್ ಅವರಿಗೆ ಏಜೆಂಟರು ವಂಚಿಸಿದ್ದರು. ಅವರನ್ನು ಅಕ್ರಮವಾಗಿ ಸೇನೆಗೆ ಸೇರಿಸಲಾಗಿತ್ತು. ಯಾವುದೇ ತರಬೇತಿಯಿಲ್ಲದೆ ಅವರಿಬ್ಬರೂ ಕಳೆದ ವರ್ಷದ ಜೂನ್‌ನಿಂದ ರಷ್ಯಾ ಸೇನೆಯಲ್ಲಿ, ಯುದ್ಧಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು.




