ವಾಷಿಂಗ್ಟನ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಭೀಕರ ದಾಳಿ ನಡೆಸಿರುವುದಕ್ಕೆ ಪುಟಿನ್ ವಿರುದ್ಧ ಅಪರೂಪಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಾಪ್ರಹಾರ ನಡೆಸಿದ್ದು, 'ವ್ಲಾದಿಮಿರ್ ದಾಳಿ ನಿಲ್ಲಿಸಿ' ಎಂದು ಗುರುವಾರ ಕಟುವಾಗಿ ಹೇಳಿದ್ದಾರೆ.
'ಕೀವ್ ಮೇಲಿನ ದಾಳಿ ಸರಿಯಲ್ಲ. ಇದು ಅನಗತ್ಯ ಮತ್ತು ಕೆಟ್ಟ ಸಮಯ. ವಾರಕ್ಕೆ 5 ಸಾವಿರ ಸೈನಿಕರು ಸಾಯುತ್ತಿದ್ದಾರೆ. ವ್ಲಾದಿಮಿರ್ ಈ ದಾಳಿ ನಿಲ್ಲಿಸಿ! ಶಾಂತಿ ಒಪ್ಪಂದವನ್ನು ಮಾಡಿಕೊಳ್ಳೋಣ!' ಎಂದು ತಮ್ಮ ಸಾಮಾಜಿಕ ಜಾಲತಾಣ 'ಟ್ರುಥ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೀವ್ ನಗರದ ಮೇಲೆ ರಷ್ಯಾ ಒಂದು ತಾಸಿನ ಅವಧಿಯಲ್ಲಿ ನಡೆಸಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ 9 ಜನರು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೀವ್ ಮೇಲೆ ಕಳೆದ ಜುಲೈನಿಂದ ಈವರೆಗೆ ನಡೆದ ದಾಳಿಗಳಲ್ಲಿ ಇದು ಅತ್ಯಂತ ಹೆಚ್ಚಿನ ಮಾರಕ ದಾಳಿ ಎನಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಒಪ್ಪಂದ ಏರ್ಪಡಿಸುವ ಅಮೆರಿಕದ ಪ್ರಯತ್ನವು ಪ್ರಗತಿ ಸಾಧಿಸದ ಕಾರಣ ಟ್ರಂಪ್ ಅವರ ಹತಾಶೆ ಹೆಚ್ಚುತ್ತಿದೆ.




