ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏ. 13ರಂದು ದ್ವಜಾರೋಹಣದೊಂದಿಗೆ ಆರಂಭಗೊಂಡಿತು.
13ರಂದು ಬೆಳಗ್ಗೆ6.30ಕ್ಕೆ ವೇದಪಾರಾಯಣ, 9ಕ್ಕೆ ಧ್ವಜಾರೋಹಣ ನಡೆಯಿತು. 10ಕ್ಕೆ ಸಹಸ್ರ ಕುಂಭಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾದನೆ, ರಾತ್ರಿ 8ಕ್ಕೆ ಉತ್ಸವ ಬಲಿ ನಡೆಯಿತು.
ಸೋಮವಾರ ಬೆಳಗ್ಗೆ 5ಕ್ಕೆ ದೀಪೋತ್ಸವ, ವಿಷು ಕಣಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಶ್ರೀದೇವರ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಪಂಚವಾದ್ಯ, ತುಲಾಭಾರ ಸೇವೆ ನಡೆಯಿತು. ನಾಡಿನ ಉದ್ದಗಲದಿಂದ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮಾ.27 ರಿಂದ ಆರಂಭಗೊಂಡು ಏ.7ರ ತನಕ ನಡೆದ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಬಳಿಕ ನಡೆದ ಮೊದಲ ಜಾತ್ರೋತ್ಸವದ ಹಿನ್ನೆಲೆಯಲ್ಲಿ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಭಕ್ತ ಜನರು ಆಗಮಿಸಿದ್ದು ಕಂಡುಬಂತು.
ಇಂದು(ಏ.15) ಬೆಳಗ್ಗೆ 5ಕ್ಕೆ ದೀಪೋತ್ಸವ, ಉತ್ಸವ ಬಲಿ, ರಾತ್ರಿ 8ಕ್ಕೆ ನಡುದೀಪೋತ್ಸವ, ಸೇವೆ ಸುತ್ತು ಸೇವೆಗಳು ನಡೆಯುವುದು.
16ರಂದು ಬೆಳಗ್ಗೆ 5ಕ್ಕೆ ದೀಪೋತ್ಸವ, ದರ್ಶನ ಬಲಿ, ತುಲಾಭಾರ ಸೇವೆ, ಸಂಜೆ 7ಕ್ಕೆ ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಘೋಷಯಾತ್ರೆ ತಾಲೀಮು ಪ್ರದರ್ಶನದೊಂದಿಗೆ ತೆರಳಲಿರುವುದು. ಮೂಲಸ್ಥಾನದಲ್ಲಿ ಕಟ್ಟೆಪೂಜೆ, ನಂತರ ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ, ಶಯನ, ಕವಾಟ ಬಂಧನ ನಡೆಯುವುದು. 17ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾಧನೆ, ರಾತ್ರಿ 8ಕ್ಕೆ ಉತ್ಸವಬಲಿ, 10ಕ್ಕೆ ವಿಶೇಷ ವಿದ್ಯುದ್ದೀಪಾಲಂಕಾರಗೊಂಡ ಶ್ರೀಕ್ಷೇತ್ರದ ಕೆರೆಯಲ್ಲಿ ಶ್ರೀದೇವರ ಅವಭೃತ ಸ್ನಾನ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು.




.jpg)
