ನವದೆಹಲಿ: ಕೇಂದ್ರ ವಕ್ಫ್ ಪರಿಷತ್ತು ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಂದಿನ ವಿಚಾರಣೆಯವರೆಗೆ ಯಾವುದೇ ನೇಮಕಾತಿ ನಡೆಸುವುದಿಲ್ಲ ಮತ್ತು ನ್ಯಾಯಾಲಯಗಳು ವಕ್ಫ್ ಎಂದು ಘೋಷಿಸಿರುವ ಆಸ್ತಿಗಳನ್ನು ಡಿ-ನೋಟಿಫೈ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ಭರವಸೆ ನೀಡಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆ.ವಿ. ವಿಶ್ವನಾಥನ್ ಅವರ ತ್ರಿಸದಸ್ಯ ಪೀಠವು ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆ ದಾಖಲಿಸಿಕೊಂಡಿತು.
ಕಾಯ್ದೆಯ ಕೆಲವೊಂದು ನಿಯಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡುವ ನ್ಯಾಯಪೀಠದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಬಲವಾಗಿ ವಿರೋಧಿಸಿತು. 'ನ್ಯಾಯಾಲಯಗಳು ವಕ್ಫ್ ಎಂದು ಘೋಷಿಸಿರುವ ಆಸ್ತಿಗಳು 'ಬಳಕೆಯ ಕಾರಣದಿಂದಾಗಿ ವಕ್ಫ್' ಆಗಿರಲಿ ಅಥವಾ 'ಕ್ರಯಪತ್ರದ ಮೂಲಕ ವಕ್ಫ್ ಆಗಿರಲಿ', ಅವುಗಳನ್ನು ಡಿನೋಟಿಫೈ ಮಾಡುವುದಿಲ್ಲ' ಎಂದು ಮೆಹ್ತಾ ಹೇಳಿದರು.
ವಕ್ಫ್ ತಿದ್ದುಪಡಿ ಕಾಯ್ದೆಗೆ ಪರೋಕ್ಷವಾಗಿ ತಡೆ ನೀಡುವ ಮೂಲಕ ನ್ಯಾಯಪೀಠವು ಕಠಿಣ ನಿಲುವು ತಾಳಬಾರದು ಎಂದು ಅವರು ಮನವಿ ಮಾಡಿದರು.
ಕಾಯ್ದೆಯ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳಿಗೆ ಕೇಂದ್ರ ಸರ್ಕಾರವು ಏಳು ದಿನಗಳಲ್ಲಿ ಪ್ರಾಥಮಿಕ ಪ್ರತಿಕ್ರಿಯೆ ಸಲ್ಲಿಸಲಿದೆ ಮತ್ತು ಮುಂದಿನ ದಿನಾಂಕದವರೆಗೆ ಕಾಯ್ದೆಯ ಸೆಕ್ಷನ್ 9 ಹಾಗೂ 14ರ ಅಡಿಯಲ್ಲಿ ಪರಿಷತ್ ಅಥವಾ ಮಂಡಳಿಗಳಿಗೆ ಯಾವುದೇ ನೇಮಕಾತಿ ನಡೆಯುವುದಿಲ್ಲ ಎಂದು ಅವರು ತಿಳಿಸಿದರು. 'ಈ ಮಸೂದೆಯನ್ನು ಸಂಸತ್ತಿನಲ್ಲಿ ಅಗತ್ಯ ಚರ್ಚೆ, ಪ್ರಕ್ರಿಯೆ ನಂತರವೇ ಅನುಮೋದಿಸಲಾಗಿದೆ. ಆದ್ದರಿಂದ, ಸರ್ಕಾರದ ವಾದ ಆಲಿಸದೆ ತಡೆಯಾಜ್ಞೆ ನೀಡಬಾರದು' ಎಂದು ಮನವಿ ಮಾಡಿದರು.
ಸರ್ಕಾರ ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ಐದು ದಿನಗಳೊಳಗೆ ಅರ್ಜಿದಾರರು ಸ್ಪಷ್ಟೀಕರಣ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿತು. ಪ್ರಕರಣದ ವಿಚಾರಣೆಯನ್ನು ಮೇ 5ರಂದು ನಡೆಸಲು ನ್ಯಾಯಪೀಠ ನಿರ್ಧರಿಸಿತು.
'ಹಿಂದಿನ 1995ರ ಕಾಯ್ದೆಯ ಅಡಿಯಲ್ಲಿ ಯಾವುದೇ ವಕ್ಫ್ ಆಸ್ತಿಯ ನೋಂದಣಿಯಾಗಿದ್ದಲ್ಲಿ, ಅಂತಹ ಅಸ್ತಿಯನ್ನು ಮುಂದಿನ ವಿಚಾರಣೆಯವರೆಗೆ ಡಿನೋಟಿಫೈ ಮಾಡುವಂತಿಲ್ಲ' ಎಂದು ಸಿಜೆಐ ಸ್ಪಷ್ಟಪಡಿಸಿದರು.
ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡಬಾರದು ಎಂಬುದು ಸೇರಿದಂತೆ ಕೆಲವು ಪ್ರಸ್ತಾವವನ್ನು ನ್ಯಾಯಪೀಠವು ಕೇಂದ್ರ ಸರ್ಕಾರದ ಮುಂದೆ ಬುಧವಾರ ಇರಿಸಿತ್ತು.
ನ್ಯಾಯಪೀಠವು ಕೆಲವೊಂದು ಸೆಕ್ಷನ್‌ಗಳನ್ನು ಮೇಲ್ನೋಟಕ್ಕೆ ಓದಿಕೊಂಡು ಕಾಯ್ದೆಗೆ ತಡೆ ನೀಡಬಹುದೇ ಎಂಬ ಪ್ರಶ್ನೆಯನ್ನು ಗುರುವಾರ ಮುಂದಿರಿಸಿದ ಮೆಹ್ತಾ, 'ಶಾಸನಬದ್ಧ ನಿಯಮಕ್ಕೆ ನ್ಯಾಯಾಲಯ ತಡೆ ನೀಡಲು ಮುಂದಾದಲ್ಲಿ, ಅದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಲಿದೆ. ನಾವು ಆಗ ಶಾಸನದ ಇತಿಹಾಸ ಮತ್ತು ತಿದ್ದುಪಡಿಗಳ ಕುರಿತು ನ್ಯಾಯಪೀಠಕ್ಕೆ ಮಾಹಿತಿ ಒದಗಿಸಬೇಕಾಗುತ್ತದೆ' ಎಂದರು.
'ಸಾಕಷ್ಟು ಸಮಾಲೋಚನೆ ನಡೆಸಿದ ಬಳಿಕವೇ ಮಸೂದೆ ಮಂಡಿಸಲಾಗಿದೆ. ಲಕ್ಷ ಲಕ್ಷ ಪ್ರಸ್ತಾವನೆಗಳನ್ನು ಸ್ವೀಕರಿಸಿದ ನಂತರ ಕೊನೆಯದಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ' ಎಂದು ಅವರು ವಿವರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ನಾವು ಈ ಪ್ರಕರಣದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತಿಲ್ಲ' ಎಂದು ಸ್ಪಷ್ಟನೆ ನೀಡಿತು.
ಜೊತೆಗೆ ಸಿಜೆಐ, 'ನಾವು ಹೊಣೆಗಾರಿಕೆಯಲ್ಲಿ ಬದಲಾವಣೆ ತರಲು ಬಯಸುವುದಿಲ್ಲ. ಸಂಸತ್ತು ಕಾನೂನುಗಳನ್ನು ಮಾಡುತ್ತದೆ, ಕಾರ್ಯಾಂಗ ನಿರ್ಧರಿಸುತ್ತದೆ ಮತ್ತು ನ್ಯಾಯಾಂಗ ವಿಶ್ಲೇಷಿಸುತ್ತದೆ' ಎಂದರು.
ಐದು ಅರ್ಜಿಗಳ ವಿಚಾರಣೆ
'ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ 100 ಅಥವಾ 120 ಅರ್ಜಿಗಳ ವಿಚಾರಣೆ ಅಸಾಧ್ಯ' ಎಂದ ಪೀಠವು ಒಟ್ಟು ಅರ್ಜಿಗಳ ಪೈಕಿ ಐದನ್ನು ಮಾತ್ರ ವಿಚಾರಣೆಗೆ ಪರಿಗಣಿಸಲು ನಿರ್ಧರಿಸಿತು. ಯಾರು ವಾದಿಸಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು ಎಂದು ವಕೀಲರಿಗೆ ಪೀಠ ಸೂಚಿಸಿತು.
ವಕೀಲರಾದ ಎಜಾಜ್ ಮಕ್ಬೂಲ್, ವಿಷ್ಣು ಶಂಕರ್ ಜೈನ್ ಮತ್ತು ಕಾನು ಅಗರ್ವಾಲ್ ಅವರನ್ನು ಕೇಂದ್ರದ ನೋಡಲ್ ವಕೀಲರನ್ನಾಗಿ ನ್ಯಾಯಾಲಯವು ನೇಮಿಸಿತು. ಮೇ 5ರಂದು ಪ್ರಾಥಮಿಕ ವಿಚಾರಣೆ ನಡೆಸಲಾಗುವುದು ಮತ್ತು ಅಗತ್ಯವಿದ್ದರೆ ಮಧ್ಯಂತರ ಆದೇಶ ಹೊರಡಿಸಲಾಗುವುದು ಎಂದು ಪೀಠ ಸ್ಪಷ್ಟಪಡಿಸಿತು.
ದಿನದ ಬೆಳವಣಿಗೆಗಳು...
ಟ ವಕ್ಫ್ ಆಸ್ತಿಯನ್ನು ಮುಂದಿನ ವಿಚಾರಣೆವರೆಗೆ ಡಿನೋಟಿಫೈ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಕಾಂಗ್ರೆಸ್, ಸಿಪಿಎಂ, ಮುಸ್ಲಿಂ ಲೀಗ್, ವೈಎಸ್‌ಆರ್ ಕಾಂಗ್ರೆಸ್ ಸ್ವಾಗತಿಸಿವೆ
ಟ ವಕ್ಫ್ ಕಾಯ್ದೆ ವಿರೋಧಿಸಿ ಮುರ್ಶಿದಾಬಾದ್‌ನಲ್ಲಿ ನಡೆದ ಹಿಂಸಾಚಾರವನ್ನು ವಿರೋಧ ಪಕ್ಷಗಳು ಏಕೆ ಖಂಡಿಸಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಶ್ನಿಸಿದ್ದಾರೆ
ಟ ಗಲಭೆಯಿಂದ ಸಹಜ ಸ್ಥಿತಿಗೆ ಮರಳುತ್ತಿರುವ ಮುರ್ಶಿದಾಬಾದ್‌ಗೆ ರಾಜ್ಯಪಾಲ ಆನಂದ ಬೋಸ್ ಭೇಟಿ ನೀಡಬಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋರಿದ್ದಾರೆ
ಟ ದಾವೂದಿ ಬೊಹ್ರಾ ಸಮುದಾಯದ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಕ್ಫ್ ತಿದ್ದುಪಡಿ ಕಾಯ್ದೆಗಾಗಿ ಕೃತಜ್ಞತೆ ಸಲ್ಲಿಸಿದೆ. ಈ ಸಮುದಾಯದ ಕೆಲವು ಬೇಡಿಕೆಗಳನ್ನು ಕಾಯ್ದೆಯಲ್ಲಿ ಸೇರಿಸಿಕೊಳ್ಳಲಾಗಿದೆ
ಟ ಕಾಯ್ದೆ ಕುರಿತು ವಿರೋಧ ಪಕ್ಷಗಳು ಹರಡಿರುವ 'ತಪ್ಪುಕಲ್ಪನೆ'ಗಳನ್ನು ಹೋಗಲಾಡಿಸಲು ಅಭಿಯಾನ ನಡೆಸಲಾಗುವುದು ಎಂದು ತ್ರಿಪುರಾ ಬಿಜೆಪಿ ಹೇಳಿದೆ
ಸಂಜೀವ್ ಖನ್ನಾ, ಮುಖ್ಯ ನ್ಯಾಯಮೂರ್ತಿನಾವು ಹೊಣೆಗಾರಿಕೆಯಲ್ಲಿ ಬದಲಾವಣೆ ತರಲು ಬಯಸುವುದಿಲ್ಲ. ಸಂಸತ್ತು ಕಾನೂನುಗಳನ್ನು ಮಾಡುತ್ತದೆ, ಕಾರ್ಯಾಂಗ ನಿರ್ಧರಿಸುತ್ತದೆ ಮತ್ತು ನ್ಯಾಯಾಂಗ ವಿಶ್ಲೇಷಿಸುತ್ತದೆ ತುಷಾರ್ ಮೆಹ್ತಾ,, ಸಾಲಿಸಿಟರ್ ಜನರಲ್‌ಅಗತ್ಯ ಸಮಾಲೋಚನೆ ನಡೆಸಿದ ಬಳಿಕವೇ ಮಸೂದೆ ಮಂಡಿಸಲಾಗಿದೆ. ಲಕ್ಷ ಲಕ್ಷ ಪ್ರಸ್ತಾವನೆಗಳನ್ನು ಸ್ವೀಕರಿಸಿದ ನಂತರ ಕೊನೆಯದಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್ ನಾಯಕವಕ್ಫ್ ತಿದ್ದುಪಡಿ ಕಾಯ್ದೆಯು ಕಾನೂನಾತ್ಮಕವಾಗಿ ಲೋಪಗಳಿಂದ ಕೂಡಿದೆ, ನೈತಿಕವಾಗಿ ಟೊಳ್ಳಾಗಿದೆ ಮತ್ತು ಸಂವಿಧಾನದ ಆತ್ಮಕ್ಕೆ ನೇರವಾಗಿ ದಾಳಿ ಮಾಡುತ್ತದೆ.




.webp)
.webp)
