ಕೊಚ್ಚಿ: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಹೋರಾಟದ ಮರೆಯಲ್ಲಿ ಬಾಂಗ್ಲಾದೇಶದ ಭಯೋತ್ಪಾದ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವವರು ಕೇರಳ ಸೇರಿದಂತೆ ದೇಶಾದ್ಯಂತ ಗಲಭೆ ಸೃಷ್ಟಿಸುವ ಹುನ್ನಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ಮಾಹಿತಿ ನೀಡಿದೆ.
ಪಶ್ಚಿಮಬಂಗಾಳದ ಮುರ್ಶಿದಾಬಾದ್‍ನಲ್ಲಿ ನಡೆಸಿರುವ ಅದೇ ರೀತಿಯ ಗಲಭೆಯನ್ನು ಕೇರಳ ಸೇರಿದಂತೆ ವಿವಿಧೆಡೆ ಹುಟ್ಟುಹಾಕಲು ಬಾಂಗ್ಲಾದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವವರು ಷಡ್ಯಂತ್ರ ಹೂಡುತ್ತಿದ್ದಾರೆ. ಮುರ್ಶಿದಾಬಾದ್ ಗಲಭೆಯಲ್ಲಿ ಬಾಂಗ್ಲಾ ಭಯೋತ್ಪಾದಕ ಸಂಘಟನೆಯ ನಂಟು ಈಗಾಗಲೇ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳೂ ಜಾಗ್ರತೆ ಪಾಲಿಸುವಂತೆಯೂ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಬಾಂಗ್ಲಾದೇಶದ ನಿವಾಸಿಗಳು ಅಕ್ರಮವಾಗಿ ಪಶ್ಚಿಮಬಂಗಾಳಕ್ಕೆ ನುಸುಳಿ, ಅಲ್ಲಿಂದ ನಕಲಿ ಆಧಾರ್‍ಕಾರ್ಡು ಹಾಗೂ ಗುರುತಿನ ಚೀಟಿ ತಯಾರಿಸಿ ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೇರಿಕೊಂಡಿರುವುದನ್ನು ಕೇಂದ್ರ ಗೃಹಖಾತೆ ಪತ್ತೆಹಚ್ಚಿದೆ. ಈಗಾಗಲೇ ಕೇರಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ನಿವಾಸಿಗಳನ್ನು ಪತ್ತೆಹಚ್ಚಿ ಸೆರೆಹಿಡಿಯಲಾಗಿತ್ತು. ಹಲವಾರು ಮಂದಿ ಬಂಗಾಳ ನಿವಾಸಿಗಳ ಸೋಗಿನಲ್ಲಿ ಕೆಂಪುಕಲ್ಲು, ಮರದ ಕಾರ್ಖಾನೆ, ಗಾರೆಕೆಲಸ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಇವರ ಬಗ್ಗೆ ನಿಗಾಯಿರಿಸಬೇಕಾಗಿದೆ.





