ಜಮ್ಮು: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಲ್ಲಿ ಸೇನಾಪಡೆಗಳ ಕಾರ್ಯಾಚರಣೆ ಸನ್ನದ್ಧತೆಯನ್ನು ಪರಿಶೀಲಿಸಲು ಪಶ್ಚಿಮ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಬುಧವಾರ ಕಥುವಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈ ಭಾಗದಲ್ಲಿ ನಡೆದ ಹಲವು ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ನಾಲ್ವರು ಪೊಲೀಸರು ಹುತಾತ್ಮರಾಗಿದ್ದರು.
ಈ ಬೆನ್ನಲ್ಲೇ, ಮತ್ತೊಂದು ಭೀಕರ ದಾಳಿ ನಡೆದಿದ್ದು, ಕಾರ್ಯಾಚರಣೆಗಳನ್ನು ಮುಂದುವರಿಸುವ ಹಿನ್ನೆಲೆಯಲ್ಲಿ ಕಥುವಾದಲ್ಲಿನ ಪ್ರದೇಶಗಳು ಮತ್ತು ಒಳನಾಡಿಗೆ ಲೆಫ್ಟಿನೆಂಟ್ ಜನರಲ್ ಕಟಿಯಾರ್ ಭೇಟಿ ನೀಡಿದ್ದಾರೆ.
ಪಶ್ಚಿಮ ಕಮಾಂಡ್‌ನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್, ರೈಸಿಂಗ್ ಸ್ಟಾರ್ ಕಾರ್ಪ್ಸ್‌ನ ಕಾರ್ಯಾಚರಣೆ ಸನ್ನದ್ಧತೆಯನ್ನು ಪರಿಶೀಲಿಸಿದರು. ಕಥುವಾದಲ್ಲಿನ ಬನಿ-ಮಚೇಡಿಯ ಪ್ರದೇಶಗಳಿಗೆ ಭೇಟಿ ನೀಡಿದರು ಎಂದು ಪಶ್ಚಿಮ ಕಮಾಂಡ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಭದ್ರತೆ ಮತ್ತು ಸನ್ನದ್ಧತೆಯನ್ನು ಖಚಿತಪಡಿಸುವಲ್ಲಿ ಸೈನಿಕರ ಅಚಲ ದೃಢತೆ ಮತ್ತು ಅಸಾಧಾರಣ ವೃತ್ತಿಪರತೆಯನ್ನು ಅವರು ಶ್ಲಾಘಿಸಿದರು.
ಜಮ್ಮುವಿನ ಕೆಲವು ಭಾಗಗಳು ಮತ್ತು ಕಥುವಾ, ಸಾಂಬಾ ಅವಳಿ ಗಡಿ ಜಿಲ್ಲೆಗಳ 9 ಕಾರ್ಪ್ಸ್ ಪಶ್ಚಿಮ ಕಮಾಂಡೆಂಟ್ ಅಡಿ ಬರುತ್ತವೆ.




