ನವದೆಹಲಿ: ಶೀಘ್ರದಲ್ಲೇ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸುವ ಸಾಧ್ಯತೆಯಿದೆ, ಈ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಲಾಗುವುದು ಎಂದು ಭಾರತ ಸರ್ಕಾರ ಗುರುವಾರ ಹೇಳಿದೆ.
'ಈ ಯಾತ್ರೆ ಇದೇ ವರ್ಷ ಆರಂಭವಾಗಲಿದ್ದು, ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ.
2020ರಿಂದ ಮಾನಸ ಸರೋವರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ಜನವರಿಯಲ್ಲಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಬೀಜಿಂಗ್‌ನಲ್ಲಿ ಚೀನಾದ ವಿದೇಶಾಂಗ ಕಾರ್ಯದರ್ಶಿ ಸುನ್ ವೀಡಾಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸಲು ಕೆಲವು ಜನ-ಕೇಂದ್ರಿತ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಹಾಗೂ ಚೀನಾ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ನಿರ್ಧರಿಸಿದ್ದವು.




