ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಳೆದು 48 ದಿನಗಳ ನಂತರ ಗುರುವಾರ ಶ್ರೀ ದೇವರಿಗೆ ದೃಢಕಲಶ ನೆರವೇರಿತು. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರಗಿತು. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಆರಂಭವಾದ ಶಿವಾರ್ಪಣಂ ವೈವಿಧ್ಯಮಯ ಯೋಜನೆಗಳಲ್ಲೊಂದಾದ ಶಿವಪಂಚಾಕ್ಷರೀ ಜಪಲಿಪಿ ಯಜ್ಞದ ಅಂಗವಾಗಿ ಅಷ್ಟ ಭಾಷೆಗಳಲ್ಲಿ ಮೂಡಿಬಂದ ಪುಸ್ತಕದ ಸಮರ್ಪಣೆ ವಿಶೇಷ ಪ್ರಾರ್ಥನೆಯೊಂದಿಗೆ ನಡೆಯಿತು. 48 ಪುಟಗಳ 1500 ಕ್ಕೂ ಮಿಕ್ಕಿ ಪುಸ್ತಕಗಳಲ್ಲಿ ಭಗವದ್ಭಕ್ತರು 8 ಭಾಷೆಗಳಲ್ಲಿ ಶಿವಪಂಚಾಕ್ಷರೀ ಮಂತ್ರವನ್ನು ಬರೆದು ಕ್ಷೇತ್ರಕ್ಕೆ ಸಮರ್ಪಣೆ ಮಾಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಆಡಳಿತ ಮೊಕ್ತೇಸರ ವೈ.ಶಾಮ ಭಟ್, ಮೊಕ್ತೇಸರರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ನಾಡಿನ ಗಣ್ಯರು, ಭಗವದ್ಭಕ್ತರು ಪಾಲ್ಗೊಂಡು ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.




.jpg)
