ಮಂಜೇಶ್ವರ : ಕೇಂದ್ರ ಸರ್ಕಾರದ ವಕ್ಸ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಜೇಶ್ವರದಲ್ಲಿ ಎಲ್ಲಾ ಮುಸ್ಲಿಂ ಸಂಘಟನೆಗಳು ಒಟ್ಟುಗೂಡಿ ರಾಷ್ಟ್ರಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್ ತಿದ್ದುಪಡಿ ವಿಧೇಯಕ 25ನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ವಕ್ಫ್ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕುಂಜತ್ತೂರಿನಿಂದ ಹೊಸಂಗಡಿ ತನಕ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನಾ ಮೆರವಣಿಗೆಗೂ ಮುನ್ನ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನುಷ ಕೃತ್ಯವನ್ನು ಖಂಡಿಸಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿಗಾಗಿ ಮೌನ ಪ್ರಾರ್ಥಣೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆಗೆ ಮಂಜೇಶ್ವರದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂತು. ಮಂಜೇಶ್ವರದ ಬಹುತೇಕ ಮುಸ್ಲಿಂ ಸಂಘಟನೆಗಳ ಮುಖಂಡರು, ರಾಜಕೀಯ ನೇತಾರರು, ಜಾತ್ಯಾತೀತರು, ಕಾರ್ಯಕರ್ತರು ಸೇರಿದಂತೆ ಸಹಸ್ರಾರು ಮಂದಿ ಭಾಗಿಯಾದರು.
ಪ್ರತಿಭಟನಾ ಮೆರವಣಿಗೆಯಲ್ಲಿ ವಕ್ಸ್ ತಿದ್ದುಪಡಿ ಕಾಯ್ದೆಯ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿ ಶಾಂತವಾದ ರೀತಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ತಡೆಯನ್ನು ಸೃಷ್ಟಿಸದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು.

.jpg)
