ಬದಿಯಡ್ಕ: ದೈವಿಕ ಆರಾಧನೆಗಳು ನಮ್ಮ ಅಂತರಂಗದ ಶಕ್ತಿ ಸಂಚಯನಕ್ಕೆ ಬೆಂಬಲವಾಗಿ ಸಮಗ್ರ ವ್ಯಕ್ತಿತ್ವ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಆಧುನಿಕ ತಲೆಮಾರು ಆಧ್ಯಾತ್ಮಿಕತೆ, ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚು ತೊಡಗಿಸಿಕೊಂಡು ಮುನ್ನಡೆಸುತ್ತಿರುವುದು ಭರವಸೆ ಮೂಡಿಸಿದೆ. ಸಂಘಟನೆ, ಸಂವೇದನೆ ಮತ್ತು ಸವಾಲುಗಳಿಗೆ ಪ್ರತಿಕ್ರಿಯಿಸುವ ನವ ಸಮಾಜ ವ್ಯವಸ್ಥೆ ಪರಂಪರೆಯನ್ನು ಸಂರಕ್ಷಿಸುವ ಬಗೆಗೂ ಕಾರ್ಯಪ್ರವೃತ್ತರಾಗಬೇಕು ಎಂದು ಕೆ.ಎಸ್.ಇ.ಬಿ. ನಿರ್ದೇಶಕ ಸುರೇಂದ್ರ ಪಿ. ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನ್ಯ ಸಮೀಪದ ಕಜಳ ಶ್ರೀಚಾಮುಂಡೇಶ್ವರಿ ಮತ್ತು ಕಲ್ಲುರ್ಟಿ ಸನ್ನಿಧಿಯಲ್ಲಿ ಶನಿವಾರ ನಡೆದ 35ನೇ ವಾರ್ಷಿಕೋತ್ಸವದ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಆಚರಣೆಗಳ ಹಿಂದೆಯೂ ಕುಟುಂಬ, ಸಮಾಜವನ್ನು ಬೆಂಬಲಿಸುವ ಶಕ್ತಿಯಿರುತ್ತದೆ. ಕಾಲಾಕಾಲಕ್ಕೆ ಆರಾಧನೆಗಳಲ್ಲಿ ನಡೆಸುವ ಕಾರ್ಯಚಟುವಟಿಕೆಗಳು ನಮ್ಮೆಲ್ಲರ ಆತ್ಮೋದ್ಧಾರಕ್ಕೆ ದಾರಿದೀಪವಾಗಿ ಬದುಕಿನ ಸಾರ್ಥಕತೆಗೆ ಕಾರಣವಾಗಲಿ ಎಂದವರು ತಿಳಿಸಿದರು.
ಶ್ರೀಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ವಾಮನ ನಾಯ್ಕ ಅರಂತೋಡು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೇರಳ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಪಿ., ಕಾನೂನು ಮಾಪನ ವಿಭಾಗದ ಇನ್ಸ್‍ಫೆಕ್ಟರ್ ಶಶಿಕಲಾ ಸುಬ್ರಹ್ಮಣ್ಯ, ಶಿಕ್ಷಕಿ ಲೀಲಾ ಟೀಚರ್, ಕಲ್ಲಕಟ್ಟ ಮಜ್ದೂರರ ಶಾಲಾ ವ್ಯವಸ್ಥಾಪಕ ಪಿ.ವಿ.ಕೇಶವ, ನಿವೃತ್ತ ರೈಲ್ವೇ ಅಧಿಕಾರಿ ಐತ್ತಪ್ಪ ನಾಯ್ಕ ಮರ್ದಂಬೈಲು, ಧಾರ್ಮಿಕ ಮುಂದಾಳು ಗಣೇಶ್ ಪಾರೆಕಟ್ಟೆ, ಮಧೂರು ಗ್ರಾ.ಪಂ.ಸಿಡಿಎಸ್ ಅಧ್ಯಕ್ಷೆ ಸುಮ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಕುಲ ಸಚಿವ ಡಾ.ಎ.ಸುಬ್ಬಣ್ಣ ರೈ, ನಿವೃತ್ತ ಸೇನಾಧಿಕಾರಿಗಳಾದ ಪಜ್ಜ ತಿರುಮಲೇಶ್ವರ ಭಟ್, ಕೃಷ್ಣ ನಾಯ್ಕ ನೀರ್ಚಾಲು, ನಿವೃತ್ತ ಅಂಚೆ ಮಾಸ್ತರ್ ಸುಂದರ ಶೆಟ್ಟಿ ಕೊಲ್ಲಂಗಾನ, ಶಿಕ್ಷಕಿ ಮಾಲತಿ ನಾರಾಯಣ ಹುಣಸೆ ಅಡಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅಭಿನಂದನಾ ಭಾಷಣಗೈದರು. ಜೊತೆಗೆ ಬದಿಯಡ್ಕ ಗ್ರಾ.ಪಂ.ಸದಸ್ಯ ಶ್ಯಾಮಪ್ರಸಾದ ಮಾನ್ಯ ಅವರನ್ನು ಗೌರವಿಸಲಾಯಿತು. ಸುಲೋಚನಾ ಕಲ್ಲಕಟ್ಟ ಸ್ವಾಗತಿಸಿ, ಮಾಲಾ ಕೊಲ್ಲಂಗಾನ ವಂದಿಸಿದರು. ಹರಿಪ್ರಸಾದ್ ಏವುಂಜೆ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ನಾಯ್ಕ ಕಜಳ ಸಹಕರಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೀಪ ಪ್ರಜ್ವಲನೆ, ಗಣಪತಿಹೋಮ, ಪೂಜೆಗಳು ತಂತ್ರಿವರ್ಯ ಅನಂತಪದ್ಮನಾಭ ತುಂಗ ಭಟ್ ಬನ್ನೂರು ಅವರಿಂದ ನಡೆಯಿತು. ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ, ನೃತ್ಯ ಕಾರ್ಯಕ್ರಮಗಳು ನಡೆದವು.

.jpg)
.jpg)

