ನವದೆಹಲಿ: ದೇಶದಾದ್ಯಂತ 15 ರಾಜ್ಯಗಳಲ್ಲಿ ಮೇ 20 ರಿಂದ 30ರವರೆಗೆ 'ಜೈಹಿಂದ್ ಸಭೆ' ನಡೆಸುವುದಾಗಿ ಕಾಂಗ್ರೆಸ್ ಗುರುವಾರ ಘೋಷಿಸಿದೆ.
ನಮ್ಮ ಸಶಸ್ತ್ರ ಪಡೆಗಳ ಧೈರ್ಯವನ್ನು ಶ್ಲಾಘಿಸುವ, ಯಶಸ್ಸಿಗೆ ನಮನ ಸಲ್ಲಿಸುವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಸರ್ಕಾರ ನಿರ್ವಹಿಸುವ ರೀತಿ, ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿರ್ವಹಿಸುವಲ್ಲಿ ಅಮೆರಿಕದ ಪಾಲು ಮತ್ತು ಅದರ ಹೇಳಿಕೆ ಬಗ್ಗೆ ಸರ್ಕಾರ ಮೌನವಾಗಿರುವುದರ ಕುರಿತು ಪ್ರಶ್ನಿಸುವ ಉದ್ದೇಶವನ್ನು ಸಭೆ ಹೊಂದಿದೆ ಎಂದು ಪಕ್ಷ ಹೇಳಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಘಟನಾ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಸಭೆಯಲ್ಲಿ ನಿವೃತ್ತ ಸೇನಾ ಸೈನಿಕರು, ಪಕ್ಷದ ನಾಯಕರು ಮತ್ತು ಸಾರ್ವಜನಿಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿ, ಬಾರ್ಮರ್, ಶಿಮ್ಲಾ, ಹಲ್ದವಾನಿ, ಪಟ್ನಾ, ಜಬಲ್‌ಪುರ, ಪುಣೆ, ಗೋವಾ, ಬೆಂಗಳೂರು, ಕೊಚ್ಚಿ, ಗುವಾಹಟಿ, ಕೋಲ್ಕತ್ತ, ಹೈದರಾಬಾದ್, ಭುವನೇಶ್ವರ, ಪಠಾನ್‌ಕೋಟ್‌ನಲ್ಲಿ ಜೈಹಿಂದ್ ಸಭೆ ನಡೆಯಲಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜತೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಪ್ರಧಾನಿಯವರ ಮೌನವನ್ನು ಪ್ರಶ್ನಿಸಲು ದೇಶಾದ್ಯಂತ ರ್‍ಯಾಲಿಗಳನ್ನು ನಡೆಸುವುದಾಗಿ ಹೇಳಿದೆ.






