ಕಾಸರಗೋಡು: ವಂದೇಭಾರತ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಆಹಾರ ಸೇವಿಸಿದ ಐದು ಮಂದಿಗೆ ಅಸೌಖ್ಯ ಕಾಣಿಸಿಕೊಂಡಿದ್ದು, ಇವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿರುವನಂತಪುರ ಮಂಗಲಪುರ ನಿವಾಸಿ ಮಹಮ್ಮದ್ ಶಾದುಲಿ, ಮಹಮ್ಮದ್ ಶಿಬಿಲಿ, ನಜ್ಮಾ, ಕೃಷ್ಣಾ ಕುಮಾರಿ, ಇವರ ಪುತ್ರಿ ಗೌರಿಕೃಷ್ಣ ಆಸ್ಪತ್ರೆಗೆ ದಾಖಲಾದವರು. ಗೋವಾದಿಂದ ಮಂಗಳೂರಿಗೆ ಆಗಮಿಸಿದ್ದ ರೈಲಿನಲ್ಲಿ ವಿತರಿಸಿದ ಫ್ರೈಡ್‍ರೈಸ್ ಸೇವಿಸಿದ ನಂತರ ಇವರಲ್ಲಿ ಅಸೌಖ್ಯ ಕಾಣಿಸಿಕೊಂಡಿದೆ. ವಂದೇಭಾರತ್ ರೈಲಲ್ಲಿ ಮಂಗಳೂರು ತಲುಪಿದ ಇವರು, ತಿರುವನಂತಪುರ-ಪೋರ್‍ಬಂದರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ತಿರುವನಂತಪುರಕ್ಕೆ ತೆರಳಲು ಮಂಗಳೂರಿನಿಂದ ಹೊರಟಿದ್ದರು. ಅಲ್ಪ ಹೊತ್ತಿನಲ್ಲಿ ವಾಂತಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಾಸರಗೋಡಿನ ರೈಲ್ವೆ ಅಧಿಕಾರಿಗಳು ಇವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಜತೆಗಿದ್ದ ಇನ್ನೊಬ್ಬ ಪ್ರಯಾಣಿಕಗೂ ಅಸೌಖ್ಯ ಕಾಣಿಸಿಕೊಂಡಿದ್ದು, ಇವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಫ್ರೈಡ್‍ರೈಸ್, ತರಕಾರಿ ಸೇವಿಸಿದವರಲ್ಲಿ ಮಾತ್ರ ಈ ಅಸೌಖ್ಯ ಕಾಣಿಸಿಕೊಂಡಿರುವುದಗಿ ಮಾಹಿತಿಯಿದೆ.




