ಬದಿಯಡ್ಕ: ಜೀವನಾನುಭವಗಳ ಸಾರ ರೂಪವಾಗಿ ಕಾವ್ಯ ಅಭಿವ್ಯಕ್ತಿಗೊಳ್ಳುತ್ತದೆ. ಕಾವ್ಯ ನಿರೂಪಣೆಯಲ್ಲಿ ಕವಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ತೊಡಗಿಸಿಕೊಂಡಾಗ ಸಾರ್ವಕಾಲಿಕ ಮೌಲ್ಯಗಳೊಂದಿಗೆ ಜನಮಾನಸದಲ್ಲಿ ಬೇರೂರುತ್ತದೆ ಎಂದು ಸಾಹಿತಿ ನರಸಿಂಹ ಭಟ್ ಏತಡ್ಕ ತಿಳಿಸಿದರು.
ಮಾನ್ಯ ಸಮೀಪದ ಕೊಲ್ಲಂಗಾನ ಶ್ರೀನಿಲಯದ ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದೊಂದು ಓದಿಗೂ ವಿಭಿನ್ನ ಅರ್ಥಗ್ರಾಹ್ಯವಾದ ಕಾವ್ಯ ಅವಿನಾಶಿ. ಅಕ್ಷರ-ಪ್ರಾಸ ಆಡಂಬರಗಳಷ್ಟೇ ಅಲ್ಲದೆ, ಉನ್ನತ, ಗಟ್ಟಿಯಾದ ವಿಷಯ ಸಮೃದ್ಧತೆಯ ಬರಹಗಳು ಸಮಾಜ-ವ್ಯಕ್ತಿ ಪರಿವರ್ತನೆಗೆ ಬೆಂಬಲವಾಗಿರುತ್ತದೆ. ಎಲ್ಲರ ಬರಹಗಳನ್ನು ಓದುವ, ಗ್ರಹಿಸುವ ಶಕ್ತಿ ಹೆಚ್ಚಾದಷ್ಟೂ ನಮ್ಮೊಳಗಿನ ಅರಿವು ವಿಸ್ತಾರಗೊಂಡು ಬರಹಗಳಿಗೆ ಶಕ್ತಿ ನೀಡುತ್ತದೆ ಎಂದವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಮಾತನಾಡಿ, ವೈಯುಕ್ತಿಕ ಸಮಾರಂಭದಲ್ಲೂ ಸಾಹಿತ್ಯ-ಕಲಾ ಕಾರ್ಯಕ್ರಮಗಳನ್ನು ಬೆಂಬಲಿಸಿ ವೇದಿಕೆ ಕಲ್ಪಿಸಿರುವ ಪ್ರೊ.ಎ.ಶ್ರೀನಾಥ್ ಅವರ ಸಾಮಾಜಿಕ ಬದ್ಧತೆ ಅನುಸರಣೀಯ. ಬಹುಮುಖ ವ್ಯಕ್ತಿತ್ವ, ನಿತ್ಯ ನಿರಂತರ ಚಲನಶೀಲತೆಗಳು ಕಾಸರಗೋಡಿನಂತಹ ಗಡಿ ಪ್ರದೇಶದ ಭಾಷಾ ಸೌಹಾರ್ಧತೆಗೆ ಬೆಂಬಲ ನೀಡಿದೆ ಎಂದು ತಿಳಿಸಿ ಸ್ವರಚಿತ ಕವನ ವಾಚಿಸಿದರು.
ಬಾಲ ಮಧುರಕಾನನ, ಎಂ.ಪಿ.ಝಿಲ್ ಝಿಲ್, ಪ್ರೇಮಚಂದ್ರನ್ ಚೋಂಬಾಲ, ಸುಂದರ ಬಾರಡ್ಕ, ಬಾಲಕೃಷ್ಣ ಬೇರಿಕೆ, ಪರಮೇಶ್ವರ ನಾಯ್ಕ ಅರ್ತಲೆ, ಪ್ರಸನ್ನಕುಮಾರಿ ಮರ್ದಂಬೈಲು, ವನಜಾಕ್ಷಿ ಚೆಂಬ್ರಕಾನ ಸ್ವರಚಿತ ಕವನಗಳನ್ನು ವಾಚಿಸಿದರು. ಸಂಘಟಕ ಸುಭಾಷ್ ಪೆರ್ಲ ಉಪಸ್ಥಿತರಿದ್ದರು. ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ನಾಯ್ಕಾಪು ಸ್ವಾಗತಿಸಿ, ನಿರ್ವಹಿಸಿದರು.

.jpg)
.jpg)
