ಬದಿಯಡ್ಕ: ಬಳ್ಳಪದವು ವೀಣಾವಾದಿನಿ ಸಂಗೀತ ಹಾಗೂ ವೈದಿಕ-ತಾಂತ್ರಿಕ ವಿದ್ಯಾಪೀಠದ ವತಿಯಿಂದ ನಡೆದ ಮೂರು ದಿನಗಳ ಸಂಗೀತ ಹಾಗೂ ಮೃದಂಗ ಕಾರ್ಯಾಗಾರ ಮೇ 9ರಿಂದ 11 ರವರೆಗೆ ನೆರವೇರಿತು.
ಕಾರ್ಯಾಗಾರದಲ್ಲಿ ಗಾಯನ ವಿದ್ಯಾರ್ಥಿಗಳಿಗೆ ಸಂಗೀತಶಿಕ್ಷಕ, ವೀಣಾವಾದಿನಿಯ ನಿರ್ದೇಶಕ ಹಾಗೂ ಗುರು ಯೋಗೀಶ ಶರ್ಮ ಬಳ್ಳಪದವು ಅವರು ಮಾರ್ಗದರ್ಶನ ನೀಡಿದರು. ಅವರ ಪಾಠಗಳು ಕೇವಲ ಶಾಸ್ತ್ರೀಯತೆಗಷ್ಟೇ ಸೀಮಿತವಾಗಿರದೆ, ರಾಗದ ಆಂತರಿಕ ಭಾವವನ್ನೂ, ಭಕ್ತಿಯನ್ನೂ, ಕೃತಿಗಳ ಒಳಗಿರುವ ಭಾವ ಶ್ರೀಮಂತಿಕೆಯನ್ನೂ ಸ್ಪಷ್ಟವಾಗಿ ಹರಡಿದವು. ಅವರು ತಿಳಿಸಿಕೊಟ್ಟ ಸಂಗೀತಾಭ್ಯಾಸ ರೀತಿಗಳು ವಿದ್ಯಾರ್ಥಿಗಳ ಕಲಾಯಾನದಲ್ಲಿ ಉತ್ಸಾಹವನ್ನು ತುಂಬುವಲ್ಲಿ ಯಶಸ್ವಿಯಾದವು.
ಮೃದಂಗ ವಿಭಾಗದಲ್ಲಿ, ಇಬ್ಬರು ಪರಿಣಿತ ಕಲಾವಿದರು ತಮ್ಮ ವಿದ್ವತ್ತನ್ನು, ಅನುಭವದ ಅಮೃತವನ್ನು ವಿದ್ಯಾರ್ಥಿಗಳ ಮೇಲೆ ಸುರಿದರು. ವಿಖ್ಯಾತ ಕಲಾವಿದರಾದ ಕೃಷ್ಣಕುಮಾರ್ ಚೇರ್ತಲ ಮತ್ತು ಕಲ್ಲೆಕುಳಂಗರ ಉಣ್ಣಿಕೃಷ್ಣನ್ ಅವರ ತಾಳಸಾಧನೆ ಮತ್ತು ಮಾರ್ಗದರ್ಶನ ಮೃದಂಗ ವಿದ್ಯಾರ್ಥಿಗಳಿಗೆ ಅಪರೂಪದ ಕಲಾವಿಲಾಸದ ಅನುಭವವನ್ನಿತ್ತವು.
ಮುಸ್ಸಂಜೆಯ ಸಂಗೀತಾಭ್ಯಾಸ ತರಗತಿಗಳು, ಮುಂಜಾನೆಯ ಸಾಧನಾ ತರಗತಿಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದವು. ಬೆಂಗಳೂರಿನ ಡಾ. ಪದ್ಮಶ್ರೀ ಅವರು ಮುಂಜಾನೆ ಯೋಗಾಭ್ಯಾಸವನ್ನು ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಕಲ್ಲೆಕುಳಂಗರ ಉಣ್ಣಿಕೃಷ್ಣನ್, ವಯಲಿನ್ ವಿದ್ವಾನ್ ಪ್ರಭಾಕರ ಕುಂಜಾರು, ಮೂಡಬಿದಿರೆ ರಮಿತ್ ಕುಮಾರ್, ಅರಿಹಂತ್ ಇಂಡಸ್ಟ್ರೀಸ್ ನ ವಿಶ್ವಾಸ್ ಪದ್ಯಾರಬೆಟ್ಟು, ಯೋಗೀಶ ಶರ್ಮಾ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ವೀಣಾವಾದಿನಿಯಲ್ಲಿ ಕಳೆದ ಒಂದು ತಿಂಗಳಿಂದ ತಂತ್ರಪೂಜಾ ಪಾಠಗಳು ಸಹ ಆರಂಭವಾಗಿದ್ದು, ಆಧ್ಯಾತ್ಮಿಕ ಪ್ರಜ್ವಲನೆಯಲ್ಲಿ ಮತ್ತೊಂದು ಅಧ್ಯಾಯ ಆರಂಭವಾಗಿದೆ. ಈ ತರಗತಿಗಳು ಬ್ರಹ್ಮಶ್ರೀ ಅನಂತ ಭಟ್ ಚೂರಿಕ್ಕೋಡು, ಬ್ರಹ್ಮಶ್ರೀ ಆದಿತ್ಯ ಹಾಗೂ ಬ್ರಹ್ಮಶ್ರೀ ರಾಧಾಕೃಷ್ಣ ಭಟ್ ಆಲಂಗಾರು ಅವರ ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿವೆ.




.jpg)
.jpg)
.jpg)
