ಬದಿಯಡ್ಕ: ಮಾತೃಭಾಷಾ ಶಿಕ್ಷಣದ ಜೊತೆಗೆ ಆಂಗ್ಲಭಾಷಾ ಕಲಿಕೆ ಸಾಗಿದರೆ ನ್ಯಾಯ ಸಲ್ಲುತ್ತದೆ. ಆದರೆ, ಮಾತೃಭಾಷೆಯನ್ನು ಮರೆತು ಸಾಗುವ ನಮ್ಮ ನಡೆ ತಪ್ಪಾಗಿ ಸಂಸ್ಕøತಿಯಿಂದ ಹೊರಗುಳಿಯಲು ಕಾರಣವಾಗುತ್ತದೆ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ ಪಾರ್ವತಿ ಜಿ.ಐತಾಳ್ ತಿಳಿಸಿದರು.
ಮಾತೃಭಾಷೆ ಅಥವಾ ಪರಿಸರ ಭಾಷೆಯ ಮಹತ್ವವನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಇವರು, ನೀರ್ಚಾಲು ಬನವಾಸಿ ಮನೆ ಪರಿಸರದಲ್ಲಿ ಬುದ್ದ ಪೂರ್ಣಿಮೆಯ ಬೆಳದಿಂಗಳಲ್ಲಿ ಸೋಮವಾರ ಮುಸ್ಸಂಜೆ ಏರ್ಪಡಿಸಿದ್ದ ವಿನೂತನ ಸೌಹಾರ್ದ ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಮತ್ತು ಮಗು ಅರಳುವ ಭಾಷೆ ಎಂಬ ಶೀರ್ಷಿಕೆಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಕಲಿಕೆಯ ಹಂತಗಳನ್ನು ಗುರುತಿಸಬೇಕು. ಹಿಂದಿಗಿಂತ ಭಿನ್ನವಾದ ಮನೋಸ್ಥಿತಿಗಳು ಇಂದು ಮಕ್ಕಳು ಮತ್ತು ಪೋಷಕರದ್ದು. ಪರಿಸರದ ಭಾಷೆಯಲ್ಲಿ ಲಭಿಸುವ ಪ್ರಾಥಮಿಕ ಜ್ಞಾನ ಶಾಶ್ವತ ಮತ್ತು ಸ್ಪಷ್ಟ ಎಂದವರು ವಿಶ್ಲೇಶಿಸಿದರು.
ಕಾಸರಗೋಡಿನ ಕನ್ನಡ ಅಸ್ಮಿತೆ, ಮುಂದುವರಿಕೆ, ಕನ್ನಡ ಮಾಧ್ಯಮ ಶಾಲೆಗಳ ಬಗೆಗಿನ ಚಿಂತನ ಮಂಥನದ ಬಗ್ಗೆ ಸುಧೀರ್ಘ ಚರ್ಚೆಯ ರೂಪದಲ್ಲಿ ನಡೆದ ಈ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಕನ್ನಡ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್ ಅಧ್ಯಕ್ಷತೆ ವಹಿಸಿದ್ದರು. ನಯನ ಗಿರೀಶ್ ಅಡೂರು ಅವರು ಸೌಹಾರ್ದ ಸಂವಾದಕ್ಕೆ ಚಾಲನೆ ನೀಡಿದರು. 20 ಮಂದಿ ಮಂದಿ ಭಾಗವಹಿಸಿ ವಿಷಯಗಳನ್ನು ಪ್ರಸ್ತುತಪಡಿಸಿದರು. ಜೊತೆಗೆ ಕಾಸರಗೋಡಿನ ಕನ್ನಡ, ತುಳು ಅಸ್ಮಿತೆಗಳ ಆಧಾರಗಳಾದ ಸ್ಥಳನಾಮ ಪಲ್ಲಟ ಪ್ರಕ್ರಿಯೆಯ ಕುರಿತು ವಿಶೇಷ ಚರ್ಚೆ ನಡೆಯಿತು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಸಮತಾ ಸಾಹಿತ್ಯ ವೇದಿಕೆಯ ಸುಂದರ ಬಾರಡ್ಕ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಉಪಸ್ಥಿತರಿದ್ದು ಶುಭಹಾರೈಸಿದರು. ಬಳಿಕ ಕಾವ್ಯಗಾನಯಾನ, ಭಾವಗಾನಯಾನ ನಡೆಯಿತು.
ಪ್ರಾಧ್ಯಾಪಕ ಬನವಾಸಿಯ ನಿರ್ಮಾತೃ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ತಿಕ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
