ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ನೇತೃತ್ವದಲ್ಲಿ ನಡೆಯುತ್ತಿರುವ ವೈಶಾಖ ನಟನಂ ನೃತ್ಯೋತ್ಸವದ ನಾಲ್ಕನೇ ದಿನ, ವಿವಿಧ ರಾಜ್ಯಗಳ ಕಲಾವಿದರು ನೃತ್ಯ ವೈಭವವನ್ನು ನೇರವೇರಿಸಿದರು. ರಾಮಾ ವೇಣುಗೋಪಾಲ್ (ಬೆಂಗಳೂರು) ಮತ್ತು ಅವರ ಶಿಷ್ಯವೃಂದ 'ಕಲಾ ಕಲ್ಪಕ್ಷೇತ್ರ' ತಂಡ, ವೈಷ್ಣವಿ ನೃತ್ಯಶಾಲೆ (ಬೆಂಗಳೂರು) ತಂಡ, ಭರತನಾಟ್ಯವನ್ನು ಪ್ರದರ್ಶಿಸಿದರು.
ಮುಂಬೈಯಿಂದ ಆದಿತಿ ಅಖಿಲ್ ಮತ್ತು ವೈಷ್ಣವಿ ಸೂರ್ಯ ನಾರಾಯಣನ್ ನೃತ್ಯ ಸೇವೆ ನೀಡಿದರು. ಮಹಿತಾ ಸುರೇಶ್ (ಚೆನ್ನೈ), ರಾಮಾ ನೃತ್ಯ ವಿಹಾರ (ಕೊಚ್ಚಿನ್), ಪನ್ನಗ ರಾವ್ ಮತ್ತು ಅನಘಾಶ್ರೀ (ಉಡುಪಿ) ನೃತ್ಯವನ್ನಾಡಿದರು. ಹಿರಿಯ ಕಲಾವಿದೆ ಉಷಾ ರಾಣಿ ಅವರಿಂದ ಮೋಹಿನಿಯಾಟ್ಟಂ ರೋಮಾಂಚಕವಾಗಿ ಪ್ರದರ್ಶನಗೊಂಡಿತು. ವಿಶಾಖಪಟ್ಟಣಂ ತಂಡದ ಸೌಂದರ್ಯ ಮದ್ದಾಳಿ ಮತ್ತು ತಂಡ ಕೂಚಿಪುಡಿಯಲ್ಲಿ ಅತ್ಯಂತ ಸುಂದರವಾಗಿ ನೃತ್ಯ ಪ್ರದರ್ಶನ ನೀಡಿದರು. ಮುಂಬೈನ ಸುಜಾತಾ ನಾಯರ್ ಹಾಗೂ ಪುತ್ರಿ ಶರಣ್ಯ ಅವರ ಜೊತೆಯಲ್ಲಿ ಮೋಹಿನೀಯಟ್ಟಂನಲ್ಲಿ ಉತ್ತಮ ಪ್ರದರ್ಶನ ನೀಡಿದರು. ನೃತ್ಯ ಗುರು ನಿಲೇಶ್ವರಂ ಕಲಾಮಂಡಲಂ ಅಜಿತ್ ಅವರನ್ನು ಗೋಶಾಲೆಯ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಉದುಮ ಶಾಸಕ ಸಿ. ಎಚ್. ಕುಞಂಬು ಉಪಸ್ಥಿತರಿದ್ದರು. ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೆ ನಿರಂತರವಾಗಿ ನಡೆಯುವ ನೃತ್ಯೋತ್ಸವದಲ್ಲಿ, ಮಂಗಳವಾರ ಸಂಜೆ ಗೋಶಾಲೆಯ ನಂದಿಮಂಟಪದಲ್ಲಿ ಅಶ್ವಿನಿ ನಂಬಿಯಾರ್ ಅವರಿಂದ ಮೋಹಿನೀಯಟ್ಟಂ, ನವ್ಯ ಭಟ್ ಅವರಿಂದ ಭರತನಾಟ್ಯ, ಮುಂಬೈನ ಐಶ್ವರ್ಯಾ ಹರೀಶ್ ಅವರಿಂದ ಭರತನೃತ್ಯ ವಿಶೇಷವಾಗಿ ನಡೆಯಿತು.

.jpg)
