ಕಾಸರಗೋಡು: ಜಿಲ್ಲೆಯ ಅಚ್ಚಕನ್ನಡ ಪ್ರದೇಶಗಳಲ್ಲಿನ ಸ್ಥಳನಾಮ ಮಲಯಾಳೀಕರಣದೊಂದಿಗೆ ವಿಕೃತಿ ಪಡೆದುಕೊಳ್ಳಲಾರಂಭಿಸಿದ್ದು, ಜನತೆ ಗೊಂದಲಕ್ಕೀಡಾಗುತ್ತಿದ್ದಾರೆ. ಜಿಲ್ಲಾ ಕೇಂದ್ರ ಕಾಸರಗೋಡಿನ ಹೆಸರನ್ನೇ ವಿಕೃತಿಗೊಳಿಸಿ'ಕಾಸರ್‍ಕೋಡ್'ಎಂದುಬರೆಯಲಾಗುತ್ತಿದೆ!
ಇನ್ನು ಕಾಸರಗೋಡು ಜಿಲ್ಲೆಯ ಬೇಡಡ್ಕವನ್ನು ಬೇಡಗಂ, ಬದಿಯಡ್ಕ ಸನಿಹದ ಚೇಡಿಕಾನವನ್ನು ಚೆಡೇಕ್ಕಲ್, ಮಾಯಿಪ್ಪಾಡಿ ಸನಿಹದ ಪುಳ್ಕೂರು ಸ್ಥಳನಾಮವನ್ನು 'ಪುಳಿಕ್ಕೂರ್', ಕಾಸರಗೋಡಿನ ಆನೆಬಾಗಿಲನ್ನು ಆನವಾದುಕ್ಕಲ್, ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರವನ್ನು ಆನಂದಪುರ, ಕುಂಬಳೆಯನ್ನು ಕುಂಬಳಂ ಹೀಗೆ ಸ್ಥಳನಾಮವನ್ನು ವ್ಯಾಪಕವಾಗಿ ಮಲಯಾಳೀಕರಣಗೊಳಿಸಲಾಗುತ್ತಿದೆ. ಸ್ಥಳನಾಮವನ್ನು ಈ ರೀತಿ ವಿಕೃತಿಗೊಳಿಸುವ ಮೂಲಕ ಅಚ್ಚಕನ್ನಡ ಪ್ರದೇಶವಾಗಿರುವ ಕಾಸರಗೋಡನ್ನು ಹಂತಹಂತವಾಗಿ ಮಲಯಾಳೀಕರಣಗೊಳಿಸುವ ಹುನ್ನಾರವೂ ನಡೆದುಬರುತ್ತಿರುವುದಾಗಿ ಕನ್ನಡಪರ ಹೋರಾಟಗಾರರ ಅನಿಸಿಕೆಯಾಗಿದೆ.
ಕನ್ನಡಿಗರೂ ಜವಾಬ್ದಾರರು:
ಕನ್ನಡ ಪ್ರದೇಶದ ಹೆಸರನ್ನು ಮಲಯಾಳೀಕರಣಗೊಳಿಸುತ್ತಿರುವುದರ ವಿರುದ್ಧ ಪ್ರಬಲ ಹೋರಾಟದ ಕೊರತೆಯಿಂದ ಜಿಲ್ಲೆಯ ಬಹುತೇಕ ಕನ್ನಡನಾಮಾಂಕಿತ ಪ್ರದೇಶ ಇಂದು ವಿಕೃತಿಗೊಳಗಾಗುತ್ತಿದೆ. ಗಡಿನಾಡು ಕಾಸರಗೋಡಿನ ಕನ್ನಡಿಗರು ಹೊಂದಿರುವ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಅರಿವಿನ ಕೊರತೆಯಿಂದ ಬಹುತೇಕ ಕನ್ನಡಿಗರು ಮಲಯಾಳಿ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಮಲಯಾಳದ ಅರಿವಿಲ್ಲದಿದ್ದರೂ, ಕನ್ನಡಿಗರು ಅರ್ಜಿ ನಮೂನೆಗಳನ್ನು ಇನ್ನೊಬ್ಬರ ಸಹಾಐದಿಂದ ಮಲಯಾಳದಲ್ಲೇ ಬರೆದು ನೀಡುವ ಮೂಲಕ ತಮ್ಮ ಔದಾರ್ಯ ಮೆರೆಯುತ್ತಿದ್ದಾರೆ. ಜಿಲ್ಲೆಯ ನಾನಾ ಇಲಾಖೆಗಳಿಗೆ ಕನ್ನಡದಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿ ನಮೂನೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ, ಇಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿರುವುದಾಗಿ ಸ್ವತ: ಅಧಿಕಾರಿಗಳೇ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸುತ್ತಿದ್ದಾರೆ! ಪ್ರತಿ ಇಲಾಖೆಗೆ ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ಹೆಚ್ಚಾದಂತೆ ಅನಿವಾರ್ಯವಾಗಿ ಅಲ್ಲಿ ಕನ್ನಡಿಗರ ಬೇಡಿಕೆಗೂ ಬೆಲೆ ಬರಲು ಸಾಧ್ಯ ಎಂಬುದಾಗಿ ಕನ್ನಡ ಹೋರಾಟಗಾರರೊಬ್ಬರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸಮಗ್ರ ಅದ್ಯಯನಕ್ಕೆ ಸಮಿತಿ:
ಜಿಲ್ಲೆಯ ಕನ್ನಡ ನಾಮಾಂಕಿತ ಪ್ರದೇಶ, ಗ್ರಾಮ, ಸ್ಥಳ ನಾಮಗಳನ್ನು ನಿರಂತರವಾಗಿ ಮಲಯಾಳೀಕರಣ ನಡೆಸುತ್ತಿರುವ ಗಂಭೀರ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಲ್ಪಿಸಲು ಕರ್ನಾಟಕ ರಾಜ್ಯ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡದ ಸ್ಥಳ ನಾಮಗಳನ್ನು ಮಲಯಾಳೀಕರಣಗೊಳಿಸುತ್ತಿರುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಪ್ರಾಧಿಕಾರವು ಐದು ಮಂದಿ ಸದಸ್ಯರ ತಜ್ಞ ಸಮಿತಿಯನ್ನು ನಿಯೋಜಿಸಿದೆ.
ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಲಾಗಿದೆ. ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೆÇ್ರ. ಎ. ಶ್ರೀನಾಥ್, ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಕೆ. ಶಶಿಧರ ಶೆಟ್ಟಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಹಾಗೂ ಕವಿ, ಸಂಘಟಕ ಸುಂದರ ಬಾರಡ್ಕ ಅವರನ್ನು ಸಮಿತಿ ಸದಸ್ಯರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಕನ್ನಡ ಸಂಘಟಕರೂ ಆಗಿರುವ ಎ. ಆರ್. ಸುಬ್ಬಯ್ಯಕಟ್ಟೆ ಅವರ ಮನವಿ ಮೇರೆಗೆ ಸಮಿತಿಯನ್ನು ಘೋಷಿಸಲಾಗಿದ್ದು, ಸಮಿತಿ ಚಟುವಟಿಕೆಗಳ ಮೇಲ್ನೋಟವನ್ನು ಎ. ಆರ್. ಸುಬ್ಬಯ್ಯಕಟ್ಟೆ ಅವರು ವಹಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.



