HEALTH TIPS

ಪಾಕಿಸ್ತಾನ: ಬಲೂಚಿಸ್ತಾನದ ಸಹಾಯಕ ಆಯುಕ್ತರಾಗಿ ಹಿಂದೂ ಮಹಿಳೆ ನೇಮಕ

ಕರಾಚಿ:ಪಾಕಿಸ್ತಾನದ ಹಿಂದೂ ಮಹಿಳೆ 25 ವರ್ಷದ ಕಾಶಿಶ್ ಚೌಧರಿ, ಪ್ರಕ್ಷುಬ್ಧ ಬಲೂಚಿಸ್ತಾನದ ಪ್ರಾಂತ್ಯದ ಸಹಾಯಕ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಈ ಹುದ್ದೆಗೆ ನೇಮಕವಾದ ಮೊದಲ ಅಲ್ಪಸಂಖ್ಯಾತ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಾಂತ್ಯದ ಚಗೈ ಜಿಲ್ಲೆಯ ನೋಶ್ಕಿ ಎಂಬ ದೂರದ ಪಟ್ಟಣದ ಕಾಶಿಶ್, ಬಲೂಚಿಸ್ತಾನ ಸಾರ್ವಜನಿಕ ಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.

ಸೋಮವಾರ, ಕಾಶಿಶ್ ತನ್ನ ತಂದೆ ಗಿರ್ಧಾರಿ ಲಾಲ್ ಅವರೊಂದಿಗೆ ಕ್ವೆಟ್ಟಾದಲ್ಲಿ ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಅವರನ್ನು ಭೇಟಿಯಾಗಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸಬಲೀಕರಣ ಹಾಗೂ ಪ್ರಾಂತ್ಯದ ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

ನನ್ನ ಮಗಳು ತನ್ನ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದಾಗಿ ಸಹಾಯಕ ಆಯುಕ್ತಳಾಗಿರುವುದು ನನಗೆ ತುಂಬಾ ಹೆಮ್ಮೆಯ ವಿಷಯ ಎಂದು ಲಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವ್ಯಾಪಾರಿ ಲಾಲ್, ತಮ್ಮ ಮಗಳು ಯಾವಾಗಲೂ ಓದಬೇಕು ಮತ್ತು ಮಹಿಳೆಯರಿಗಾಗಿ ಏನಾದರೂ ಮಾಡಬೇಕೆಂದು ಕನಸು ಕಂಡಿದ್ದಳು ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನದಿಂದ ಪ್ರಮುಖ ಹುದ್ದೆಗಳನ್ನು ಪಡೆದಿರುವುದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಬುಗ್ತಿ ಹೇಳಿದ್ದಾರೆ.

ಕಾಶಿಶ್ ಅವರು ರಾಷ್ಟ್ರ ಮತ್ತು ಬಲೂಚಿಸ್ತಾನಕ್ಕೆ ಹೆಮ್ಮೆಯ ಸಂಕೇತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಹಿಂದೂ ಸಮುದಾಯದ ಮಹಿಳೆಯರು ಪಾಕಿಸ್ತಾನದ ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ.

2022ರ ಜುಲೈನಲ್ಲಿ ಮಣೇಶ್ ರೋಪೆಟಾ ಎಂಬ ಮಹಿಳೆ ಕರಾಚಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಅವರು ಈ ಹುದ್ದೆಗೇರಿದ ಮೊದಲ ಹಿಂದೂ ಮಹಿಳೆಯಾಗಿದ್ದರು.

ಕರಾಚಿಯ 35 ವರ್ಷದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪುಷ್ಪಾ ಕುಮಾರಿ ಕೊಹ್ಲಿ, ಹಿಂದೂ ಮಹಿಳೆಯರು ಉನ್ನತ ಸ್ಥಾನ ತಲುಪಲು ಬೇಕಾದ ದೃಢತೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ನಾನು ಸಿಂಧ್ ಪೊಲೀಸ್ ಸಾರ್ವಜನಿಕ ಸೇವೆಗಳ ಪರೀಕ್ಷೆಯಲ್ಲೂ ಉತ್ತೀರ್ಣಳಾಗಿದ್ದೇನೆ. ಇಲ್ಲಿ ಅನೇಕ ಹಿಂದೂ ಹುಡುಗಿಯರು ಶಿಕ್ಷಣ ಪಡೆದು ಏನನ್ನಾದರೂ ಸಾಧಿಸಲು ಹಾತೊರೆಯುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿಗೆ ಸೇರಿದ ಕೊಹ್ಲಿ ಹೇಳಿದ್ಧಾರೆ.

2019ರಲ್ಲಿ ಸಿಂಧ್ ಪ್ರಾಂತ್ಯದ ಶಹದದ್‌ಕೋಟ್ ಎಂಬ ಪಟ್ಟಣದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಸುಮನ್ ಪವನ್ ಬೋದಾನಿ ಎಂಬ ಹಿಂದೂ ಮಹಿಳೆ, ಹೈದರಾಬಾದ್‌ನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries