ಪೆರ್ಲ: ಗುರುವಾರ ಕೇರಳ ಪ್ಲಸ್ ಟು ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಯ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯು ಶೇ.96 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಚೆರ್ಕಳ ಮಾರ್ಥೋಮ ಹೈಯರ್ ಸೆಕೆಂಡರಿ ವಿಶೇಷ ಶಾಲೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನ ಪಡೆದ ಶೇಣಿ ಹೈಯರ್ ಸೆಕೆಂಡರಿ ಶಾಲೆಯ 121 ವಿದ್ಯಾರ್ಥಿಗಳು ಎರಡು ಬ್ಯಾಚ್‍ಗಳಲ್ಲಿ ಪರೀಕ್ಷೆ ಬರೆದಿದ್ದು, 116 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಪೈಕಿ ಆನ್ ಮರಿಯಾ ಶಾಜಿ, ಸಿತಾರ ಸೈನಬ, ಅಲ್ಬಿನ್ ಜೋಜೋ, ಆಯಿಷತ್ ತನ್ಸಿಹಾ, ಅಂಜಲಿ ಎಂಬ ಐವರು ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ. ಐದು ಮಂದಿ ವಿದ್ಯಾರ್ಥಿಗಳು ಎ ಗ್ರೇಡ್ ಗೆ ಅರ್ಹತೆ ಪಡೆದಿದ್ದಾರೆ. ಪ್ಲಸ್ ಟು ಪರೀಕ್ಷೆಯ ಸಾಮಾನ್ಯ ವಿಭಾಗದಲ್ಲಿ ಶೇಣಿ ಹೈಯರ್ ಸೆಕೆಂಡರಿ ಶಾಲೆಯು ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಅರ್ಹತೆಯನ್ನು ಪಡೆದಿದೆ.
2014 ರಂದು ಶ್ರೀ ಶಾರದಾಂಬಾ ವಿದ್ಯಾಸಂಸ್ಥೆಯಲ್ಲಿ ಪ್ಲಸ್ ಟು ವಿಭಾಗವು ಆರಂಭಗೊಂಡಿತ್ತು.
ಅಂದಿನಿಂದ ಶಾಲೆಯು ತನ್ನ ಯಶಸ್ಸಿನ ಪ್ರಮಾಣದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಈ ಹಿಂದಿನ ಎಲ್ಲಾ ಪರೀಕ್ಷೆಗಳಲ್ಲಿ ಶೇ. 90 ರಷ್ಟು ತೇರ್ಗಡೆಯನ್ನು ನಿರಂತರವಾಗಿ ಕಾಯ್ದುಕೊಂಡಿದೆ. ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಶಾಲಾ ಅಡಳಿತ ಸಮಿತಿ, ಶಾಲಾ ಪ್ರಾಂಶುಪಾಲರು, ಉಪನ್ಯಾಸಕರು, ರಕ್ಷಕ ಶಿಕ್ಷಕ ಸಂಘ, ಮಾತೃ ಸಂಘ, ಹಳೆ ವಿದ್ಯಾರ್ಥಿ ಸಂಘಗಳು ಅಭಿನಂದಿಸಿವೆ.


