HEALTH TIPS

Ind-Pak Tensions | ತೆರೆಮರೆಯಲ್ಲಿದ್ದ US ಮಧ್ಯಸ್ಥಿಕೆ ಮುನ್ನೆಲೆಗೆ: ತಿವಾರಿ

ನವದೆಹಲಿ: 'ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ತೆರೆಮರೆಯಲ್ಲಿ ಮಧ್ಯಸ್ಥಿಕೆ ವಹಿಸುತ್ತಿದ್ದ ಅಮೆರಿಕ, ಸದ್ಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಮುನ್ನೆಲೆಗೆ ಬಂದಿರುವುದು ವಾಸ್ತವ' ಎಂದು ಕಾಂಗ್ರೆಸ್‌ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.

'ತೆರೆಮರೆಯ ಕಸರತ್ತು, ಮಧ್ಯಸ್ಥಿಕೆ, ದಲ್ಲಾಳಿ ಅಥವಾ ಇನ್ಯಾವುದೇ ಪದದಿಂದ ಕರೆಯಿರಿ, ಭಾರತ ಮತ್ತು ಪಾಕಿಸ್ತಾನ ನಡುವೆ 1990ರಿಂದ ನಡೆಯುತ್ತಿರುವ ಸಂಘರ್ಷದಲ್ಲಿ ತೃತೀಯ ರಾಷ್ಟ್ರದ ಮಧ್ಯಪ್ರವೇಶ ನಡೆಯುತ್ತಲೇ ಬಂದಿದೆ. ಇದು ಯುಪಿಎ ಅವಧಿಯಲ್ಲೂ ಆಗಿದೆ' ಎಂದು ತಿವಾರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ.

1947-1972ರವರೆಗಿನ ಭಾರತ ಮತ್ತು ಪಾಕಿಸ್ತಾನ ಸಂಬಂಧ ಅಥವಾ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದವರೆಗೆ. 1972-1990ರಲ್ಲಿ ನಡೆದ ಶಿಮ್ಲಾ ಒಪ್ಪಂದ, 1990ರ ನಂತರದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಯಾವುದೇ ಪದಗಳಲ್ಲಿ ಕರೆದರೂ ಅದು ನಡೆದಿದೆ' ಎಂದಿದ್ದಾರೆ.

'1990ರಲ್ಲಿ ಪಾಕಿಸ್ತಾನವು 'ಪರಮಾಣು' ಪದವನ್ನು ಬಳಸಿದಾಗ ರಾಬರ್ಟ್‌ ಗೇಟ್ಸ್‌ ಮಿಷನ್‌ ಜಾರಿಗೆ ಬಂತು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಶರೀಫ್ ಅವರು ಆಹ್ವಾನವಿಲ್ಲದೆ, ಘೋಷಣೆಯನ್ನೂ ಮಾಡದೆ ಶ್ವೇತಭವನಕ್ಕೆ ತೆರಳಿದ್ದರು. ಇದಾದ ತಕ್ಷಣ ಭಾರತ ಮತ್ತು ಪಾಕ್ ನಡುವೆ ಕದನ ವಿರಾಮ ಏರ್ಪಟ್ಟಿತ್ತು' ಎಂದು ವಿವರಿಸಿದ್ದಾರೆ.

2001-02ರಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಸೈನಿಕರನ್ನು ಗುರಿಯಾಗಿಸಿ ಕಲುಚಕ್‌ನಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ 'ಆಪರೇಷನ್ ಪರಾಕ್ರಮ್‌' ನಡೆಸಲಾಯಿತು. ಆ ಸಂದರ್ಭದಲ್ಲೂ ಅಮೆರಿಕ ತೆರೆಮರೆಯಲ್ಲಿ ಕೆಲಸ ಮಾಡಿತು. 2008ರಲ್ಲಿ ಮುಂಬೈ ದಾಳಿ (26/11) ಸಂದರ್ಭದಲ್ಲೂ ಅಮೆರಿಕ ಹಿಂದೆ ನಿಂತು ಕೆಲಸ ಮಾಡಿತ್ತು. 2016ರಲ್ಲಿ ಉರಿ ದಾಳಿಯಲ್ಲೂ ಇದೇ ಪುನರಾರ್ತನೆಯಾಯಿತು. ಹಿಂದೆ ನಡೆಯುತ್ತಿದ್ದ ಈ ತೆರೆಮರೆಯ ಆಟಕ್ಕೂ 2019ರಿಂದ 2025ರಲ್ಲಿ ನಡೆಯುತ್ತಿರುವುದಕ್ಕೂ ವ್ಯತ್ಯಾಸವೆಂದರೆ, ಅಂದು ಹಿಂಬದಿಯಲ್ಲಿ ಇವೆಲ್ಲವೂ ನಡೆಯುತ್ತಿದ್ದವು' ಎಂದು ತಿವಾರಿ ಹೇಳಿದ್ದಾರೆ.

'ಟ್ರಂಪ್ ಅವಧಿಯಲ್ಲಿ ತೆರೆ ಮುಂದೆ ಮಧ್ಯಸ್ಥಿಕೆ ನಡೆಯುತ್ತಿದೆ. 2019ರಲ್ಲಿ ಹನೊಯ್‌ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ ನಡುವಿನ ಮಾತುಕತೆ ಮುರುದುಬಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಟ್ರಂಪ್, 'ಭಾರತದಿಂದ ಶುಭ ಸುದ್ದಿ ಇದೆ. ಭಾರತ ಮತ್ತು ಪಾಕಿಸ್ತಾನಗಳು ಸಂಘರ್ಷದಿಂದ ಹಿಂದೆ ಸರಿದಿವೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿವೆ' ಎಂದು ಘೋಷಿಸಿದ್ದನ್ನು ತಿವಾರಿ ಹೇಳಿದ್ದಾರೆ.

'ಇದು 2025ರ ಮೇ 10ರಂದೂ ಪುನರಾವರ್ತನೆಯಾಗಿದೆ. ಕನದ ವಿರಾಮವನ್ನು ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ಬಂದೂಕು ಕೆಳಗಿಳಿಸಿವೆ. ಆದ್ದರಿಂದ, ಯಾರು ಒಪ್ಪುತ್ತಾರೋ ಇಲ್ಲವೋ ಶಿಮ್ಲಾ ಒಪ್ಪಂದ ಇದ್ದಾಗಲೂ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ನಡೆಯುತ್ತಲೇ ಬಂದಿದೆ. ಈ ಸತ್ಯವನ್ನು ಕೆಲವರು ಒಪ್ಪಿಕೊಳ್ಳದಿರಬಹುದು. ಆದರೆ ಇದೇ ವಾಸ್ತವ. ಎರಡು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳು ಕ್ಷಿಪಣಿ ದಾಳಿಗಿಳಿದಾಗ ತೃತೀಯ ರಾಷ್ಟ್ರವು ತನ್ನ ಕಾರ್ಯಾಚರಣೆ ಆರಂಭಿಸುತ್ತಲೇ ಬಂದಿದೆ' ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries