HEALTH TIPS

Republic of Balochistan | ಪಾಕ್ ಪತನ ಶೀಘ್ರ, ಬಲೂಚಿಸ್ತಾನ ಉದಯ: ಮೀರ್ ಯಾರ್

ಇಸ್ಲಾಮಾಬಾದ್: ಪಾಕಿಸ್ತಾನದಿಂದ ಪ್ರತ್ಯೇಕಗೊಂಡು 'ರಿಪಬ್ಲಿಕ್ ಆಫ್ ಬಲೂಚಿಸ್ತಾನ್‌' ರಚನೆಗೊಂಡಿದೆ ಎಂದು ಬಲೂಚ್ ವಿಮೋಚನೆಯ ನಾಯಕ ಮೀರ್ ಯಾರ್ ಬಲೂಚ್‌ ಅವರು ಘೋಷಣೆ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ವ್ಯಾಪಕವಾಗಿ ಹರಿದಾಡುತ್ತಿದೆ.

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಮೇ 7ರಂದು ಭಾರತೀಯ ಸೇನೆ 'ಆಪರೇಷನ್ ಸಿಂಧೂರ' ಆರಂಭಿಸಿತು.

ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ನಡೆದಿರುವ ಹೊತ್ತಿಗೆ ಬಲೂಚಿಸ್ತಾನ ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಸ್ವತಂತ್ರವಾಗಿದೆ ಎಂಬ ಸುದ್ದಿ ಏಷ್ಯಾ ಖಂಡದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲೇ ಸಂಚಲನ ಸೃಷ್ಟಿಸಿದೆ.

ಸಾಮಾಜಿಕ ಹೋರಾಟಗಾರ, ಬರಹಗಾರ, ವಕೀಲರೂ ಆಗಿರುವ ಮೀರ್ ಯಾರ್ ಬಲೂಚ್‌ ಅವರು ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಈ ಕುರಿತು ಸರಣಿ ಪೋಸ್ಟ್‌ಗಳನ್ನು ಮಾಡಿದ್ದಾರೆ. ಜತೆಗೆ ಬಲೂಚ್‌ನ ರಾಯಭಾರ ಕಚೇರಿ ತೆರೆಯಲು ಭಾರತ ಅನುವು ಮಾಡಿಕೊಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ. ಜತೆಗೆ ಪಾಕಿಸ್ತಾನ ಸೇನೆ ತನ್ನ ಪ್ರಾಂತ್ಯವನ್ನು ತೊರೆಯುವಂತೆ ಹಾಗೂ ಬಲೂಚಿಸ್ತಾನಕ್ಕೆ ಶಾಂತಿಸ್ಥಾಪನಾ ಪಡೆಯನ್ನು ಕಳುಹಿಸುವಂತೆ ವಿಶ್ವ ಸಂಸ್ಥೆಯನ್ನು ಕೋರಿದ್ದಾರೆ.

ನಾವು ಸ್ವತಂತ್ರರು ಎಂದು ಘೋಷಿಸಿಕೊಂಡಿದ್ದೇವೆ

ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ಪಾಕಿಸ್ತಾನದ ದೆರಾ ಬುಗ್ತಿಯಲ್ಲಿರುವ ತೈಲ ಘಟಕಗಳ ಮೇಲೆ ದಾಳಿ ಮಾಡಿ ನೂರಕ್ಕೂ ಹೆಚ್ಚು ಬಾವಿಗಳನ್ನು ವಶಪಡಿಸಿಕೊಂಡಿವೆ ಎಂದು ಮೀರ್ ಯಾರ್ ಬಲೂಚ್ ಹೇಳಿದ್ದಾರೆ.

'ಭಯೋತ್ಪಾದಕ ಪಾಕಿಸ್ತಾನದ ಪತನ ಸನಿಹ ಎಂಬ ಘೋಷಣೆ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿ ಸ್ಥಾಪನೆಗೆ ದೆಹಲಿ ಅನುಮತಿ ನೀಡಬೇಕು. ಜತೆಗೆ ಜಿನ್ಹಾ ಹೌಸ್‌ ಅನ್ನು ಬಲೂಚಿಸ್ತಾನ್‌ ಹೌಸ್‌ ಎಂದು ನಾಮಕರಣ ಮಾಡಬೇಕು' ಎಂದು ಕೋರಿದ್ದಾರೆ.

'ಪ್ರಜಾಸತ್ತಾತ್ಮಕ ರಿಪಬ್ಲಿಕ್ ಆಫ್ ಬಲೂಚಿಸ್ತಾನವನ್ನು ಸ್ವತಂತ್ರ ರಾಷ್ಟ್ರ ಎಂದು ಪರಿಗಣಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿ ಸದಸ್ಯ ರಾಷ್ಟ್ರಗಳ ಸಭೆ ಕರೆದು ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡಬೇಕು ಎಂದೆನ್ನಲಾಗಿದೆ' ಎಂದಿದ್ದಾರೆ.

'ತಕ್ಷಣವೇ ಬಲೂಚಿಸ್ತಾನಕ್ಕೆ ಶಾಂತಿ ಪಡೆಯನ್ನು ವಿಶ್ವ ಸಂಸ್ಥೆ ಕಳುಹಿಸಬೇಕು. ನಮ್ಮ ಈ ಪ್ರಾಂತ್ಯವನ್ನು ತೊರೆಯುವಂತೆ ಪಾಕಿಸ್ತಾನ ಸೇನೆಗೆ ತಾಕೀತು ಮಾಡಬೇಕು. ಬಲೂಚಿಸ್ತಾನದ ನೆಲ, ಆಕಾಶ ಮತ್ತು ಸಮುದ್ರ ಮಾರ್ಗಗಳನ್ನು ತೊರೆಯುವುದರ ಜತೆಗೆ, ಶಸ್ತ್ರಾಸ್ತ್ರ ಮತ್ತು ಇತರ ಸೇನಾ ಸಾಮಗ್ರಿಗಳನ್ನು ಇಲ್ಲಿಯೇ ಬಿಟ್ಟುಹೋಗುವಂತೆ ಸೂಚಿಸಬೇಕು' ಎಂದು ಆಗ್ರಹಿಸಿದ್ದಾರೆ.

'ಬಲೂಚಿಸ್ತಾನ ಮೇಲಿನ ನಿಯಂತ್ರಣವನ್ನು ಕೂಡಲೇ ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಮಧ್ಯಂತರ ಸರ್ಕಾರ ರಚಿಸಿ ಘೋಷಿಸಲಾಗುವುದು. ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದು ನಮ್ಮ ಬದ್ಧತೆಯಾಗಿದೆ' ಎಂದು ಮೀರ್ ಯಾರ್ ಹೇಳಿದ್ದಾರೆ.

'ಸ್ವತಂತ್ರ ಬಲೂಚಿಸ್ತಾನದ ಉದ್ಘಾಟನಾ ಸಮಾರಂಭ ಶೀಘ್ರದಲ್ಲಿ ನೆರವೇರಲಿದೆ. ಮಿತ್ರ ರಾಷ್ಟ್ರಗಳಿಗೆ ಆಹ್ವಾನ ಕಳುಹಿಸಲಾಗುವುದು. ಪೆರೇಡ್ ಮತ್ತು ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಲಾಗುವುದು. ನಮ್ಮನ್ನು ಹರಸಿ' ಎಂದು ಕೋರಿದ್ದಾರೆ.

ಇದರೊಂದಿಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಮೀರ್ ಯಾರ್ ಬಲೂಚ್, 'ನಿಮ್ಮ ಬಳಿ ಸೇನೆ ಇದೆಯಾದರೆ, ನಮ್ಮ ಬಳಿಯೂ ಬಲೂಚ್ ಸ್ವತಂತ್ರ ಯೋಧರ ಪಡೆ ಇದೆ ಎಂಬುದು ಗಮನದಲ್ಲಿರಲಿ' ಎಂದಿದ್ದಾರೆ.

ಲಂಡನ್‌ನಲ್ಲಿರುವ ಸ್ವತಂತ್ರ ಬಲೂಚಿಸ್ತಾನ ಚಳವಳಿಯ ನಾಯಕ ಹೈರಬೈರ್‌ ಮರ್ರಿ ಅವರು ಇತ್ತೀಚೆಗೆ ಲೇಖನ ಪ್ರಕಟಿಸಿ, 'ಮುಂಬೈನಲ್ಲಿರುವ ಜಿನ್ಹಾ ಹೌಸ್‌ ಅನ್ನು ಬಲೂಚಿಸ್ತಾನ ಹೌಸ್ ಎಂದು ನಾಮಕರಣ ಮಾಡಿ ಬಲೂಚಿಗಳಿಗೆ ಭಾರತ ಬಿಟ್ಟುಕೊಡಬೇಕು. 1947ರಿಂದಲೂ ಪಾಕಿಸ್ತಾನವು ಬಲೂಚಿಸ್ತಾನವನ್ನು ತನ್ನ ರಾಜಕೀಯ ಅಸ್ತ್ರವಾಗಿಸಿಕೊಂಡು ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಬಲೂಚಿಸ್ತಾನವನ್ನು ಕಡೆಗಣಿಸಲಾಗಿದೆ' ಎಂದು ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries