ಮಂಜೇಶ್ವರ: ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಿಸಿದ ಪ್ರವಾಸೋದ್ಯಮ ವಿಶ್ರಾಂತಿ ಕೇಂದ್ರ ಸಮುದ್ರ ಪಾಲಾಗಿದೆ.
ಕೇರಳ ಸರ್ಕಾರ ಮಂಜೇಶ್ವರದ ಕಣ್ವತೀರ್ಥ ಕಡಲ ತೀರದಲ್ಲಿ ಪ್ರವಾಸಿಗರಿಗಾಗಿ ಕೋಟಿಗಟ್ಟಲೆ ಹಣ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಶ್ರಾಂತಿ ಕೇಂದ್ರ ಇತ್ತೀಚೆಗೆ ಸಂಭವಿಸಿದ ಸಮುದ್ರಕ್ಷೋಭೆಯಲ್ಲಿ ಕಟ್ಟಡದ ಒಂದು ಭಾಗ ಸಮುದ್ರ ಪಾಲಾಗಿದೆ.
1 ಕೋಟಿ 15 ಲಕ್ಷ ರೂ ವೆಚ್ಚದಲ್ಲಿ ಜಿಲ್ಲಾ ಟೂರಿಸಂ ಪ್ರೋತ್ಸಾಹನ ಮಂಡಳಿಯ ಮೂಲಕ ಈ ವಿಶ್ರಾಂತಿ ಕೇಂದ್ರವನ್ನು ನಿರ್ಮಿಸಲಾಗುತ್ತಿತ್ತು. 2023ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು, ಆದರೆ ಹಲವು ತಡೆಗಳ ಕಾರಣದಿಂದ ನಿರ್ಮಾಣ ಕಾರ್ಯ ವಿಳಂಬವಾಯಿಗಿದೆ. ಸುಮಾರು 60 ಶೇಕಡಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿತ್ತು. ಈ ಹಂತದವರೆಗೆ 89 ಲಕ್ಷ ರೂ ವೆಚ್ಚವಾಗಿದ್ದು, ಉಳಿದ ಮೊತ್ತ ತೆರಿಗೆಗಳಿಗೆ ವಿನಿಯೋಗಿಸಲಾಗಿದೆ.
ಇತ್ತೀಚೆಗಷ್ಟೇ ನಿರಂತರವಾಗಿ ಸುರಿದ ಮಳೆಯಿಂದ ಸಂಭವಿಸಿದ ಸಮುದ್ರಕ್ಷೋಭೆಯು ಕಟ್ಟಡದ ಮೂರನೇ ಒಂದು ಭಾಗವನ್ನು ನಾಶಗೊಳಿಸಿದೆ. ಮುಂದಿನ ದಿನಗಳಲ್ಲಿ ಮತ್ತೆ ಸಮುದ್ರಕ್ಷೋಭೆ ಸಂಭವಿಸಿದರೆ ಇಡೀ ಕಟ್ಟಡವೇ ನಾಶವಾಗುವ ಭೀತಿಯಿದೆ.
ಅಭಿಮತ:
-ಈ ಪ್ರದೇಶ ಸಿ.ಆರ್.ಝಡ್.(ಕೋಸ್ಟಲ್ ರೆಗ್ಯುಲೇಶನ್ ಝೋನ್) ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿಗೆ ಮನೆ ಕಟ್ಟಲು ಸಹ ಸರ್ಕಾರದ ಅನುಮತಿ, ಡೋರ್ ನಂಬರ್ ಪಡೆಯಲು ಎ.11 ಕಾನೂನು ಬಹುಮುಖ್ಯ ಪ್ರಕ್ರಿಯೆಗಳಾಗಿ ಪರಿಗಣಿಸಲಾಗುತ್ತದೆ. ಇಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ, ಸಮುದ್ರದ ಅಟ್ಟಹಾಸ ವರ್ಷದಿಂದ ವರ್ಷ Éಚ್ಚುತ್ತಿರುವುದು ಗೋಚರಿಸುತ್ತಿರುವಾಗಲೂ ಯಾವುದೇ ಸಮಗ್ರ ಅಧ್ಯಯನ, ಭೂಗರ್ಭ ಅಧ್ಯಯನ ಅಥವಾ ಸಮುದ್ರಭೀತಿಯ ತೀವ್ರತೆಯ ವರದಿ ಇಲ್ಲದೆ ಪ್ರವಾಸೋದ್ಯಮದ ಹೆಸರಿನಲ್ಲಿ ಇಂಥ ದೊಡ್ಡ ಹೂಡಿಕೆಗೆ ನಿರ್ಧಾರ ತೆಗೆದುಕೊಂಡಿದ್ದು, ಸಮರ್ಥನೀಯವಲ್ಲ.
ಮಂಜೇಶ್ವರದ ಜನತೆ ದೀರ್ಘಕಾಲದಿಂದ ಬೀಚ್ ಪ್ರವಾಸೋದ್ಯಮದ ಕನಸು ಕಾಣುತ್ತಿದ್ದಾರೆ ಎಂಬುದು ನಿಜ. ಆದರೆ ಈ ಕನಸುಗಳನ್ನು ಸಾಕಾರಗೊಳಿಸುವ ಪ್ರಕ್ರಿಯೆಯಲ್ಲಿ ಸೂಕ್ತ ಯೋಜನೆ, ಪರಿಸರ ಭದ್ರತೆ ಹಾಗೂ ಭವಿಷ್ಯದ ಹಾನಿಗಳಿಗೆ ತಕ್ಕ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸಂಬಂಧಪಟ್ಟ ಇಲಾಖೆಯ ಹೊಣೆಗಾರಿಕೆ ಆಗಿತ್ತು. ಆದರೂ ಇದು ವಾಸ್ತವದಲ್ಲಿ ಸಂಭವಿಸಿಲ್ಲ ಎಂಬುದನ್ನು ಇತ್ತೀಚಿನ ಅನಾಹುತ ಪೂರಕವಾಗಿ ಸಾರುತ್ತಿದೆ.
-ಅಬ್ದುಲ್ ಜಬ್ಬಾರ್ ಬಹರೈನ್
ಸಾಮಾಜಿಕ ಕಾರ್ಯಕರ್ತರು.

.jpg)
