ಕಾಸರಗೋಡು: ದಕ್ಷಿಣದ ಕಾಶಿ ಎಂದು ಖ್ಯಾತಿಪಡೆದಿರುವ ಐತಿಹಾಸಿಕ ಮತ್ತು ಪವಿತ್ರ ಕ್ಷೇತ್ರ ಬೇಕಲ ಸನಿಹದ ತ್ರಿPಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಅಂಗವಾಗಿ ಪಿತೃ ತರ್ಪಣ ಕಾರ್ಯಕ್ರಮ ಜುಲೈ 24ರಂದು ಜರುಗಲಿದ್ದು, ಸಿದ್ಧತಾಕಾರ್ಯ ಅಂತಿಮ ಹಂತದಲ್ಲಿರುವುದಾಗಿ ದೇವಸ್ಥಾನ ಟ್ರಸ್ಟಿ ಮಂಡಳಿ ಅಧ್ಯಕ್ಷ ವಲ್ಲಿಯೋಡನ್ ಬಾಲಕೃಷ್ಣನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 5.30ಕ್ಕೆ ಉಷ ಪೂಜೆಯ ನಂತರ ಪಿತೃತರ್ಪಣ ಕಾರ್ಯ ಆರಂಭಗೊಳ್ಳಲಿದೆ. ದೇವಾಲಯದ ಮೇಲ್ಶಾಂತಿ ಬ್ರಹ್ಮಶ್ರೀ ನವೀನ್‍ಚಂದ್ರ ಕಾಯರ್ತಾಯ ಅವರ ನೇತೃತ್ವದಲ್ಲಿ, ದೇವಾಲಯದ ಅರ್ಚಕ ರಾಜೇಂದ್ರ ಅರಳಿತ್ತಾಯ ಅವರ ಪೌರೋಹಿತ್ಯದಲ್ಲಿ ಏಕ ಕಾಲಕ್ಕೆ ಇಪ್ಪತ್ತರಷ್ಟು ಪುರೋಹಿತರು ಪಿತೃಬಲಿತರ್ಪಣಾ ಕಾರ್ಯ ನೆರವೇರಿಸಿಕೊಡುವರು. ದೇವಾಲಯದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ಸ್ಥಾಪಿಸಲಾದ ಚಪ್ಪರದಲ್ಲಿ ಪಿತೃತರ್ಪಣಕಾರ್ಯ ನಡೆದುಬರಲಿದೆ. ಪಿತೃತರ್ಪಣಕ್ಕಾಗಿ ರಶೀದಿ ಪಡೆಯುವಲ್ಲಿ ಉಂಟಾಗುವ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದೇವಾಲಯದ ಕೌಂಟರ್‍ನಲ್ಲಿ ರಶೀದಿ ಒದಗಿಸುವುದರ ಜತೆಗೆ ದೇವಾಲಯದ ವೆಬ್‍ಸೈಟ್(www.trikkannadtemple.in) ಮೂಲಕ ಆನ್‍ಲೈನ್‍ನಲ್ಲಿ ರಸೀದಿ ಮಾಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಅಂದು ಬೆಳಿಗ್ಗೆ 5ರಿಂದ ದೇವಾಲಯದ ಎಂಟು ಕಾಣಿಕೆ ಕೌಂಟರ್‍ಗಳು ಕಾರ್ಯಾಚರಿಸಲಿದೆ. ದೇವಾಲಯಕ್ಕೆ ಭೇಟಿ ನೀಡುವ ಎಲ್ಲಾ ಭಕ್ತಾದಿಗಳಿಗೆ ಉಪಾಹಾರ ಹಾಗೂ ಲಘು ಪಾನೀಯ ವ್ಯವಸ್ಥೆ ಮಾಡಲಾಗಿದೆ.
25ಸಾವಿರದಷ್ಟು ಪಿತೃತರ್ಪಣ ಹಾಗೂ ಒಂದು ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಅಂದು ಕ್ಷೇತ್ರ ಸಂದರ್ಶನ ನಡೆಸಲಿರುವರು. ಪೆÇಲೀಸ್, ಕೋಸ್ಟ್ ಗಾರ್ಡ್, ಆರೋಗ್ಯ ಇಲಾಖೆಯ ಸೇವೆಯೂ ಲಭ್ಯವಿರಲಿದೆ. ಪ್ರಯಾಣ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾಸರಗೋಡು-ಕಾಞಂಗಾಡ್ ಚಂದ್ರಗಿರಿ ಸೇತುವೆ ಮೂಲಕ ಕೆಎಸ್‍ಟಿಪಿ ಹಾದಿಯಾಗಿ ಪ್ರಸಕ್ತ ಇರುವ ಬಸ್ ಸೇವೆ ಜತೆಗೆ ಹೆಚ್ಚಿನ ಬಸ್ ಸೇವೆ ಒದಗಿಸಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಮಳೆಗಾಲ ಹಿನ್ನೆಲೆಯಲ್ಲಿ ಸಮುದ್ರ ಹೆಚ್ಚುಪ್ರಕ್ಷುಬ್ಧಗೊಂಡಿರುವುದರಿಂದ ಭಕ್ತರು ಸಮುದ್ರಕ್ಕಿಳಿಯುವಾಗ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ ಎಂದೂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ. ರಾಜೇಶ್, ಸಾಂಪ್ರದಾಯಿಕ ಟ್ರಸ್ಟಿ ಸದಸ್ಯರಾದ ಮೇಲತ್ ಸತ್ಯನಾಥನ್ ನಂಬಿಯಾರ್ ಮತ್ತು ಇಡಯಿಲ್ಲಂ ಶ್ರೀವಲ್ಸನ್ ನಂಬಿಯಾರ್ ಉಪಸ್ಥಿತರಿದ್ದರು.


