ಕಾಸರಗೋಡು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿ, ಜಂಟಿ ಕಾರ್ಮಿಕ ಸಂಘಟನೆಗಳು ಜುಲೈ 9ರಂದು ಆಹ್ವಾನ ನೀಡಿರುವ ರಾಷ್ಟ್ರೀಯ ಮುಷ್ಕರ ಮಧ್ಯರಾತ್ರಿಯಿಂದ ಆರಂಭಗೊಂಡಿದೆ. ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದೆ.
ಕೇರಳದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಪೋಷಿತ ಕಾರ್ಮಿಕ ಸಂಘಟನೆಗಳು ಪ್ರತ್ಯೇಕವಾಗಿ ಮುಷ್ಕರ ನಡೆಸಲಿದೆ. ಐಎನ್‍ಟಿಯುಸಿ ಸೇರಿದಂತೆ ಐಕ್ಯರಂಗ ನೇತೃತ್ವದ ಕಾರ್ಮಿಕ ಸಂಘಟನೆಗಳು ಆಡಳಿತ ಎಡರಂಗದ ಜನವಿರೋಧಿನೀತಿಗೆದುರಾಗಿಯೂ ಮುಷ್ಕರದಲ್ಲಿ ಧ್ವನಿಯೆತ್ತಲಿದೆ. ಕೆಎಸ್ಸಾರ್ಟಿಸಿ ಸಿಬ್ಬಂದಿ ಪ್ರಮುಖ ಕಾರ್ಮಿಕ ಸಂಘಟನೆಗಳಲ್ಲಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಜುಲೈ 9ರಂದು ನಡೆಯುವ ರಾಷ್ಟ್ರೀಯ ಮುಷ್ಕರದಲ್ಲಿ ಪಾಲ್ಗೊಳ್ಳಲಿರುವ ಕಾರಣ ಕೆಎಸ್ಸಾರ್ಟಿಸಿ ಬಸ್‍ಗಳ ಸಂಚಾರವೂ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಸಾರಿಗೆ ಸಚಿವ ಕೆ.ಬಿ ಗಣೇಶ್ ಕುಮಾರ್ ಹೇಳಿಕೆ ಪ್ರಕಾರ, ಜುಲೈ 9ರ ಮುಷ್ಕರದಿಂದ ಕೆಎಸ್ಸಾರ್ಟಿಸಿ ಸಿಬ್ಬಂದಿ ದೂರ ಉಳಿಯಲಿದ್ದಾರೆ ಎಂದು ತಿಳಿಸಿದ್ದು, ಕೆಎಸ್ಸಾರ್ಟಿಸಿಯ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ತಿಳಿಸಿದೆ. ಸರ್ಕಾರಿ ಕಚೇರಿ, ಬ್ಯಾಂಕ್ ಸಿಬ್ಬಂದಿ ಹಾಜರಾತಿ ಕಡಿಮೆಯಾಗುವ ಕಾರಣ ಚಟುವಟಿಕೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಹಾಲು, ಪತ್ರಿಕೆ, ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಂದ ಮುಷ್ಕರ ಹೊರತುಪಡಿಸಲಾಗಿದೆ. ಈ ಮಧ್ಯೆ ಬಿಎಂಎಸ್ ಕಾರ್ಮಿಕ ಸಂಘಟನೆ ಮುಷ್ಕರದಿಂದ ದೂರ ಉಳಿದಿದು, ಪ್ರತಿಪಕ್ಷಗಳು ಕರೆನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ ರಾಜಕೀಯ ಪ್ರೇರಿತವಾಗಿರುವುದಾಗಿ ದೂರಿದೆ.





