ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಖಾಸಗಿ ಬಸ್ ಮಾಲಿಕರು ಕೇರಳ ರಾಜ್ಯಾದ್ಯಂತ ಮಂಗಳವಾರ ಹಮ್ಮಿಕೊಮಡಿದ್ದ ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಖಾಸಗಿ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ್ದ ಪರಿಣಾಮ, ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಯಿತು.
ಕೆಎಸ್‍ಆರ್‍ಟಿಸಿ ಬಸ್‍ಗಳು ಎಂದಿನಂತೆ ಸರ್ವೀಸ್ ನಡೆಸಿದ್ದು, ಪ್ರಯಾಣಿಕರಿಂದ ತುಂಬಿಕೊಮಡಿತ್ತು. ಕೆಲವೊಂದು ಪ್ರಮುಖ ನಗರಗಳಿಗೆ ಹೆಚ್ಚುವರಿ ಬಸ್‍ಗಳ ಸರ್ವೀಸ್ ನಡೆಸಲಾಘಿತ್ತು. ಕಾಸರಗೋಡು ರೈಲ್ವೆ ನಿಲ್ದಾಣಕ್ಕೆ ತೆರಳುವವರಿಗೆ ಹಾಗೂ ಅಲ್ಲಿಂದ ಆಗಮಿಸುವ ಪ್ರಯಾಣಿಕರಿಗಾಗಿ ಹೆಚ್ಚಿನ ಬಸ್ ಸೇವೆಯ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಹೊಂದಿರುವ ವಿದ್ಯಾನಗರ ಸಿವಿಲ್‍ಸ್ಟೇಶನ್ ಪ್ರದೇಶಕ್ಕೂ ಕೆಎಸ್ಸಾರ್ಟಿಸಿ ಹೆಚ್ಚಿನ ಸರ್ವೀಸ್ ನಡೆಸಿತ್ತು. ಕಾಸರಗೋಡಿನಿಂದ ಕಣ್ಣೂರು, ಮಂಗಳೂರು, ಸುಳ್ಯ, ಪುತ್ತೂರು ಭಾಗಕ್ಕೆ ಕೆಎಸ್ಸಾರ್ಟಿಸಿ ಸಂಚಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿರಲಿಲ್ಲ. ಕೆಎಸ್ಸಾರ್ಟಿಸಿ ಬಸ್ ಸಂಚಾರವಿಲ್ಲದ ಪ್ರದೇಶಗಳ ಪ್ರಯಾಣಿಕರು ಹೆಚ್ಚಿನ ದರ ನೀಡಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿತ್ತು. ಕೇರಳ ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್‍ಗಳು ಎಂದಿನಂತೆ ಸಂಚಾರ ನಡೆಸಿತ್ತು.
ಖಾಸಗಿ ಬಸ್ ಮಾಲಿಕರ ಸಂಘಟನೆ ಮತ್ತು ಸಾರಿಗೆ ಆಯುಕ್ತರ ಮಧ್ಯೆ ಸೋಮವಾರ ನಡೆದ ಚರ್ಚೆ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಕೇರಳ ರಾಜ್ಯಾದ್ಯಂತ ಸಾಂಕೇತಿಕ ಮುಷ್ಕರ ನಡೆದಿದ್ದು, ಜುಲೈ 22ರಿಂದ ನಡೆಸಲುದ್ದೇಶಿಸಿರುವ ಅನಿರ್ಧಿಷ್ಟಾವಧಿಕಾಲ ಮುಷ್ಕರ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.
ಕೇರಳದ ಶಾಲಾ ವಿದ್ಯಾರ್ಥಿಗಳ ಖಾಸಗಿ ಬಸ್ ಪ್ರಯಾಣ ದರವನ್ನು ಕನಿಷ್ಟ ಐದು ರೂ. ಗೆ ಹೆಚ್ಚಿಸುವುದು, ದೀರ್ಘದೂರ ಹಾಗೂ ಲಿಮಿಟೆಡ್ ಸ್ಟಾಪ್ ಬಸ್‍ಗಳ ಪರವಾನಗಿ ಸಕಾಲದಲ್ಲಿ ನವೀಕರಿಸಿ ನೀಡುವುದು, ಜಸ್ಟೀಸ್ ರಾಮಚಂದ್ರನ್ ಆಯೋಗದ ವರದಿ ಜಾರಿ ಮುಂತಾದ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಸಲಾಗಿತ್ತು.
ಆರು ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಬೇಡಿಕೆ ಈಡೇರುವ ವರೆಗೆ ಜು. 22ರಿಂದ ಅನಿಶ್ಚಿತಕಾಲ ಮುಷ್ಕರ ಹಮ್ಮಿಕೊಳ್ಳಲು ಬಸ್ ಮಾಲಿಕರ ಸಂಘ ತೀರ್ಮಾನಿಸಿದೆ.




