ಕಾಸರಗೋಡು: ನಗರಸಭೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿರುವ ಹಾಗೂ ಭ್ರಷ್ಟಾಚಾರದಿಂದ ಕೂಡಿದ ಮುಸ್ಲಿಂಲೀಗ್ ನೇತೃತ್ವದ ಐಕ್ಯರಂಗದ ಆಡಳಿತ ವಿರೋಧಿಸಿ ಬಿಜೆಪಿ ಕಾಸರಗೋಡು ನಗರಸಭಾ ಸಮಿತಿ ವತಿಯಿಂದ ನಗರಸಭಾ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆ ಜನಾಕ್ರೋಶಕ್ಕೆ ಕಾರಣವಾಯಿತು. ನಗರಸಭೆಯ ಜನವಿರೋಧಿ ಆಡಳಿತ ಖಂಡಿಸಿ ಮಹಿಳೆಯರ ಸಹಿತ ನೂರಾರು ಮಂದಿ ಪ್ರತಿಭಟನಾಕಾರರು ಪೊಲೀಸ್ ತಡೆ ಭೇದಿಸಿ ಮುನ್ನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಕಾರ್ಯಕರ್ತರನ್ನು ಚದುರಿಸಲು ಯತ್ನಿಸಿದರು.
ನಗರದ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ನಗರದ ವಿವಿಧೆಡೆ ಸಂಚರಿಸಿ ನಗರಸಭಾ ಕಾರ್ಯಾಲಯದ ಗೇಟಿನ ಮುಂಭಾಗ ತಲುಪುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದ್ದರು. ಈ ವೇಳೆ ಪೆÇೀಲೀಸರೊಂದಿಗೆ ನೂಕು ನುಗ್ಗಾಟ ನಡೆಯಿತು. ಗೇಟು ಹಾರಿ ಕೆಲವು ಕಾರ್ಯಕರ್ತರು ನಗರಸಭಾ ಕಾರ್ಯಾಲಯ ನುಗ್ಗಲು ಮುಂದಾಗುತ್ತಿದ್ದಂತೆ ಪೆÇೀಲೀಸರು ಜಲಫಿರಂಗಿ ಪ್ರಯೋಗಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿಧರಣಿ ಉದ್ಘಾಟಿಸಿದರು. ಮುಸ್ಲಿಂಲೀಗ್ ನೇತೃತ್ವದ ಐಕ್ಯರಂಗ ಕಳೆದ 25ವರ್ಷಗಳಿಂದ ನಿರಂತರ ಆಡಳಿತ ನಡೆಸುತ್ತಿರುವ ಕಾಸರಗೋಡು ನಗರಸಭೆ ಭ್ರಷ್ಟಾಚಾರದ ಮೂಲಕ ಕುಖ್ಯಾತಿಗೆ ಕಾರಣವಾಗಿದೆ. ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಸಂಬಂಧಿಸಿ ನಿರಂತರ ವಿಜಿಲೆನ್ಸ್ ತನಿಖೆ ಎದುರಿತ್ತಿರುವ ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಗರಸಭಾ ವ್ಯಾಪ್ತಿಯ ರಸ್ತೆಗಳು ಶಿಥಿಲಗೊಂಡಿದ್ದರೂ, ನಗರಸಭೆ ಮೌನ ಪಾಲಿಸುತ್ತಿದೆ. ನಗರಸಭಾ ಆಡಳಿತದ ಆಧೀನದಲ್ಲಿರುವ ಕಾಸರಗೋಡು ಜನರಲ್ ಆಸ್ಪತ್ರೆ, ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಭ್ರಷ್ಟಾಚಾರವನ್ನೇ ಮೈಗೂಡಿಸಿಕೊಂಡಿರುವ ಕಾಸರಗೋಡು ನಗರಸಭೆಯಿಂದ ಇಲ್ಲಿನ ಜನತೆ ಭ್ರಮನಿರಸನಗೊಂಡಿದ್ದಾರೆ. ನಗರಸಭಾ ಆಡಳಿತದ ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರಬಲ ಹೋರಾಟಕ್ಕೆ ನೇತೃತ್ವ ನೀಡಲಿರುವುದಾಗಿ ತಿಳಿಸಿದರು.
ನಗರಸಭಾ ಪ್ರತಿಪಕ್ಷ ಮುಖಂಡಪಿ. ರಮೇಶ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಪಿ. ಆರ್. ಸುನಿಲ್, ನಗರಸಭಾ ಸದಸ್ಯ ವರಪ್ರಸಾದ ಕೋಟೆಕಣಿ, ಉಮಾ ಕಡಪ್ಪರ, ಮಂಡಲ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಪ್ರಭು, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ನಗರಸಭೆ ಸದಸ್ಯರು, ಕಾಸರಗೋಡು ಮಂಡಲ, ಟೌನ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎರಡನೇ ದಿನವೂ ಜಲಫಿರಂಗಿ:
ನಗರದಲ್ಲಿ ಸೋಮವಾರ ಜನರಲ್ ಆಸ್ಪತ್ರೆ ಶೋಚನೀಯಾವಸ್ಥೆ ಪರಿಹರಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆ ವೇಳೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದರೆ, ಮಂಗಳವಾರ ಕಾಸರಗೋಡು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮತ್ತೆ ಜಲಫಿರಂಗಿ ಪ್ರಯೋಗಿಸಲಾಗಿದೆ. ಇದರಿಂದ ಹಲವು ಮಂದಿ ಕಾರ್ಯಕರ್ತರು ನೀರಿನಲ್ಲಿ ತೋಯ್ದುಕೊಂಡೇ ಪ್ರತಿಭಟನೆ ಮುಂದುವರಿಸಿದ್ದರು.





