ಮಂಜೇಶ್ವರ : ಕನ್ನಡದ ಪ್ರಥಮ ರಾಷ್ಟ್ರಕವಿ ಬಹುಭಾಷಾ ವಿದ್ವಾಂಸ ಸಂಶೋಧಕ ಮಂಜೇಶ್ವರ ಗೋವಿಂದ ಪೈ ಅವರ 143ನೇ ಜನ್ಮದಿನಾಚರಣೆ ಮಂಜೇಶ್ವರ ಗಿಳಿವಿಂಡುವಿನಲ್ಲಿ ಜರಗಿತು. ಗೋವಿಂದ ಪೈ ಸ್ಮಾರಕ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ, ಬೆಂಗಳೂರಿನ ರಂಗಶಂಕರ ಸಂಸ್ಥೆಯ ಕಲಾವಿದ ಮುದ್ದಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೋವಿಂದ ಪೈ ಪ್ರತಿಮೆಗೆ ಹಾರಾರ್ಪಣೆಗೈದರು. ಸ್ಮಾರಕ ಸಮಿತಿ ಅಧ್ಯಕ್ಷ, ಹಿರಿಯ ರಂಗಕರ್ಮಿ ಉಮೇಶ್ ಎಂ. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಮಕಾಲೀನ ಸಂದರ್ಭದಲ್ಲಿ ಪೈಗಳ ಸಾಹಿತ್ಯದ ಮಹತ್ವ ಮತ್ತು ಸ್ಮಾರಕ ಸಮಿತಿಯ ಕೆಲಸ ಕಾರ್ಯಗಳ ಕುರಿತು ಅವರು ಮಾತನಾಡಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಗೋವಿಂದ ಪೈಗಳ ಕಾವ್ಯ ಮತ್ತು ಸಂಶೋಧನ ಲೇಖನಗಳ ಬಗ್ಗೆ ಬೆಳಕು ಚೆಲ್ಲಿದರು. ಕವಿ ಕಯ್ಯಾರರು ಪೈಗಳ ಬಗ್ಗೆ ಬರೆದ 'ರಾಷ್ಟ್ರಕವಿ' ಕವನವನ್ನು ಅವರು ವಾಚಿಸಿದರು. ಬಹುಭಾಷಾ ಕವಿ ರವೀಂದ್ರನ್ ಪಾಡಿ ಮಲೆಯಾಳ ಕವಿತಗಳನ್ನು ಪ್ರಸ್ತುತ ಪಡಿಸಿದರು. ಕವಯಿತ್ರಿ ಶಶಿಕಲಾ ಕುಂಬಳೆ ಗೋವಿಂದ ಪೈಗಳ ವ್ಯಕ್ತಿತ್ವ ಮತ್ತು ಕ್ರಿಯಾಶಕ್ತಿಯನ್ನು ಅನಾವರಣಗೊಳಿಸುವ ಸ್ವರಚಿತ ಕವಿತೆ ವಾಚಿಸಿದರು. ಗಡಿನಾಡ ಗಾಯಕ ದಿವಾಕರ ಪಿ. ಅಶೋಕನಗರ ಅವರಿಂದ ಗೋವಿಂದ ಪೈ ಗೀತೆಗಳ ಗಾಯನ ಜರಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುದ್ದಣ್ಣ ಅವರನ್ನು ಗೋವಿಂದ ಪೈ ಸ್ಮಾರಕ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸ್ಮಾರಕ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಸದಸ್ಯ ಕಮಲಾಕ್ಷ ಕನಿಲ ವಂದಿಸಿದರು.

.jpg)
.jpg)
