ಕಾಸರಗೋಡು: ಕೇರಳದ ಆರೋಗ್ಯ ಇಲಾಖೆಯ ದು:ಸ್ಥಿತಿಯಿಂದ ರಾಜ್ಯದ ಬಡಜನರು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದಾಗಿ ಬಿಜೆಪಿ ಮುಖಂಡ ವಿ.ಕೆ ಸಜೀವನ್ ತಿಳಿಸಿದ್ದಾರೆ. ಅವರು ರಾಜ್ಯ ಆರೋಗ್ಯ ವಲಯದ ಶೋಚನೀಯಾವಸ್ಥೆ ಬಗೆಹರಿಸಲು ಹಾಗೂ ಆರೋಗ್ಯ ಖಾತೆ ಸಚಿವೆ ವೀಣಾಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆಗೆ ನಡೆದ ಮುತ್ತಿಗೆ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಆರೋಗ್ಯ ಇಲಾಖೆಯನ್ನು ವೆಂಟಿಲೇಟರ್‍ನಲ್ಲಿರಿಸಿ, ತಾನು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವುದು ವಿಪರ್ಯಾಸ. ಕೇರಳದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸ್ವತ: ಮುಖ್ಯಮಂತ್ರಿಗೇ ವಿಶ್ವಾಸವಿಲ್ಲದ ಸ್ಥಿತಿಯಿದೆ. ಕೇರಳದ ಆರೋಗ್ಯ ಇಲಾಖೆಗೆ ಮೀಸಲಿರಿಸಿದ್ದ ಮೊತ್ತವನ್ನು ಮೊಟಕುಗೊಳಿಸಿ ಬೇರೆ ಕಾಮಗಾರಿಗಳಿಗೆ ವರ್ಗಾಯಿಸುವ ಮೂಲಕ ಸರ್ಕಾರ ಬಡಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆ 12ವರ್ಷ ಕಳೆದರೂ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಪ್ರಸಕ್ತ ಓಪಿ ವಿಭಾಗ ಮಾತ್ರ ಇಲ್ಲಿ ಕಾರ್ಯಾಚರಿಸುತ್ತಿದ್ದು, ಎಂಬಿಬಿಎಸ್ ಕೋರ್ಸ್‍ಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆರಂಭಿಸಲು ಮುಂದಾಗುವ ಮೂಲಕ ಜನತೆಯನ್ನು ವಂಚಿಸಲು ಯತ್ನಿಸುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್, ಹಿರಿಯ ಮುಖಂಡರಾದ ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ, ಪಿ.ರಮೇಶ್, ವಿ.ರವೀಂದ್ರನ್, ಪದಾಧಿಕಾರಿಗಳಾದ ಪುಷ್ಪಗೋಪಾಲನ್, ಎಂ.ಬಾಲರಾಜ್, ಪ್ರಮೀಳಾ ಮಜಲ್, ಲೋಕೇಶ್‍ನೋಂಡ, ಮಹೇಶ್ ಗೋಪಾಲ್, ಎನ್.ಮಧು, ಕೆ.ಎಂ. ಅಶ್ವಿನಿ, ಎಂ.ಜನನಿ, ವೀಣಾ ಅರುಣಶೆಟ್ಟಿ, ಸಂಜೀವ ಪುಳಿಕ್ಕೂರು, ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಮೊದಲಾದವರು ನೇತೃತ್ವ ವಹಿಸಿದ್ದರು.
ಮಹಿಳೆಯರ ಸಹಿತ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹೊಸಬಸ್ ನಿಲ್ದಾಣ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಗೆ ಜನರಲ್ ಆಸ್ಪತ್ರೆ ವಠಾರದಲ್ಲಿ ಪೊಲೀಸರು ತಡೆಯೊಡ್ಡಿದ್ದರು. ಪೊಲೀಸರ ತಡೆ ಭೇದಿಸಿ ಮುನ್ನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ಜಲಫಿರಂಗಿ ಪ್ರಯೋಗಿಸುವ ಮೂಲಕ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರೂ, ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದರು. ಜಲಫಿರಂಗಿ ಪ್ರಯೋಗದಿಂದ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಒಳಗೊಂಡಂತೆ ಮಹಿಳೆಯರು ಹಾಘೂ ಇತರ ಕಾರ್ಯಕರ್ತರು ನೆಲಕ್ಕುರುಳಿದರೂ, ಜಗ್ಗದೆ ಪ್ರತಿಭಟನೆ ಮುಂದುವರಿಸಿದ್ದರು.




