ನವದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ಲೋಕಸಭೆಯು ಮಂಗಳವಾರ ಅನುಮೋದನೆ ನೀಡಿತು.
ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು, 'ಲಿಂಗದ ಕಾರಣಕ್ಕಾಗಿಯೇ ಬಹಿಷ್ಕಾರದ ಶಿಕ್ಷೆಯನ್ನು ಎದುರಿಸುವವರನ್ನು ರಕ್ಷಿಸುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ' ಎಂದು ಹೇಳಿದರು.
'ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನಾತ್ಮಕ ಮಾನ್ಯತೆ ಮತ್ತು ರಕ್ಷಣೆಯನ್ನೂ ಒದಗಿಸಲಿದೆ' ಎಂದು ಅವರು ಒತ್ತಿ ಹೇಳಿದರು.
2019ರ ಕಾನೂನು ಇಂಥವರ ವಿರುದ್ಧದ ದೌರ್ಜನ್ಯಕ್ಕೆ ಗರಿಷ್ಠ 2 ವರ್ಷ ಕಾರಾಗೃಹ ಶಿಕ್ಷೆ ನೀಡುವ ಅವಕಾಶ ನೀಡುತ್ತಿತ್ತು. ತಿದ್ದುಪಡಿ ಮಸೂದೆಯು ಗರಿಷ್ಠ 14 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶ ನೀಡುತ್ತದೆ ಎಂದು ಹೇಳಿದರು.
ಪ್ರಸ್ತಾವಿತ ಮಸೂದೆಯು ಲಿಂಗತ್ವದ ಚಹರೆಗಳನ್ನು ನಿರ್ಣಯಿಸುವ ಹಕ್ಕನ್ನು ಕಸಿದುಕೊಳ್ಳಲಿದೆ. ಇದನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

