ಮಂಜೇಶ್ವರ : ಗಡಿನಾಡಿನ ಪ್ರಸಿದ್ದ ಯಕ್ಷಗಾನ ತಂಡವಾದ ಯಕ್ಷಬಳಗ ಹೊಸಂಗಡಿ ತಂಡದ ಕರ್ಕಟಕ ಮಾಸ ಯಕ್ಷಗಾನ ತಾಳಮದ್ದಳೆ ಕೂಟ ನಾಲ್ಲು ವಾರಗಳಲ್ಲಿ ಯಶಸ್ವಿಯಾಗಿ ಜರಗಿ ಸಮಾರೋಪ ಸಮಾರಂಭ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಹಿರಿಯರ ನೆನಪು ಕಾರ್ಯಕ್ರಮ ಆ. 10 ರಂದು ಭಾನುವಾರ ಜರಗಲಿದೆ.
ಬೆಳಿಗ್ಗೆ 10.00 ರಿಂದ ಮೂಡಂಬೈಲು ಅಪ್ಪತ್ತಿಮಾರು ಶಿವರಾಮ ಪದಕಣ್ಣಾಯರ ಮನೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿಮ್ಮೇಳ ಗುರುಗಳು ಹಾಗೂ ಹಿರಿಯ ಹಿಮ್ಮೇಳ ವಾದಕರಾದ ಭಾಸ್ಕರ ಕೋಳ್ಯೂರು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಗುವುದು. ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಹಿರಿಯರ ನೆನಪು ಕಾರ್ಯಕ್ರಮ ಜರಗಲಿದ್ದು, ಕೀರ್ತಿಶೇಷ ಉಪ್ಪಳ ಕೃಷ್ಣ ಮಾಸ್ತರ್ ಅವರನ್ನು ರಾಜಾರಾಮ ರಾವ್ ಮೀಯಪದವು ನೆನಪಿಸಲಿದ್ದಾರೆ. ಸಮಾರಂಭವನ್ನು ಶಿವರಾಮ ಪದಕಣ್ಣಾಯ ದಂಪತಿಗಳು ದೀಪಬೆಳಗಿಸಿ ಉದ್ಘಾಟಿಸುವರು. ವೇದಮೂರ್ತಿ ಬಾಲಕೃಷ್ಣ ಭಟ್ ದಡ್ಡಂಗಡಿ ಶುಭಾಶಂಸನೆಗೈಯ್ಯುವರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಯೋಗೀಶ ರಾವ್ ಚಿಗುರುಪಾದೆ, ಸತೀಶ ಅಡಪ ಸಂಕಬೈಲು ಅಭ್ಯಾಗತರಾಗಿ ಭಾಗವಹಿಸುವರು.
ಬಳಿಕ ನುರಿತ ಕಲಾವಿದರಿಂದ ಭೀಷ್ಮ ಸೇನಾಧಿಪತ್ಯ ಸ್ವೀಕಾರ ತಾಳಮದ್ದಳೆ ಜರಗಲಿದೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ, ರತ್ನಾಕರ ಆಳ್ವ ದೇವಿಪುರ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ್ ಚಿಪ್ಪಾರು, ಹರಿಶ್ಚಂದ್ರ ನಾಯ್ಗ ಮಾಡೂರು, ಅಚ್ಯುತ ಪದಕಣ್ಣಾಯ, ಪ್ರಕಾಶ್ ಕಿನ್ಯ ಸಹಕರಿಸುವರು. ಪಾತ್ರವರ್ಗದಲ್ಲಿ ವಿಟ್ಲ ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್ ರಂಜಿಸಲಿದ್ದಾರೆ ಎಂದು ಯಕ್ಷಬಳಗ ಪ್ರಕಟಣೆ ತಿಳಿಸಿದೆ.


